ನ್ಯೂಸ್

ಮುಸ್ಲಿಂ ಮುಕ್ತ ಭಾರತ ಬಿಜೆಪಿಯ ಕನಸು: ಜನಾಂಗೀಯ ಹತ್ಯೆಯ ಎಐ ವಿಡಿಯೋವನ್ನು ಟೀಕಿಸಿದ ಓವೈಸಿ, ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್| AI Video

AI Video: ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಅನ್ನು ಚಿತ್ರಿಸುವ ಕೃತಕ ಬುದ್ಧಿಮತ್ತೆ ಆಧಾರಿಸಿದ ವೀಡಿಯೊ ಪ್ರಸಾರ ಮಾಡಿದ್ದಕ್ಕಾಗಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿಯು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಸ್ಸಾಂ ಘಟಕದ ವಿರುದ್ಧ ಬುಧುವಾರ (ಸೆಪ್ಟೆಂಬರ್​,17) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಓವೈಸಿ, ಭಾರತದಲ್ಲಿ ಮುಸ್ಲಿಮರ ಉಪಸ್ಥಿತಿಯನ್ನು ಬಿಜೆಪಿ ಒಂದು ಸಮಸ್ಯೆಯಾಗಿ ನೋಡುತ್ತದೆ ಎಂದು ಆರೋಪಿಸಿದ್ದಾರೆ. ಇದು ಬಿಜೆಪಿಯ ಅಸಹ್ಯಕರ ಹಿಂದುತ್ವ ಸಿದ್ಧಾಂತವಾಗಿದೆ. ಭಾರತದಲ್ಲಿ ಮುಸ್ಲಿಮರ ಅಸ್ತಿತ್ವವೇ ಬಿಜೆಪಿಗೆ ಸಮಸ್ಯೆಯಾಗಿದೆ. ಬಿಜೆಪಿ ಕನಸು ಮುಸ್ಲಿಂ ಮುಕ್ತ ಭಾರತ. ಈ ನಿರಂತರ ಗೋಳಾಟದ ಜೊತೆಗೆ, ಇವರಿಗೆ ಭಾರತದ ಬಗ್ಗೆ ಯಾವುದೇ ದೃಷ್ಟಿಕೋನವಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಅಲ್ಲದೆ, ನರೇಂದ್ರ ಮೋದಿಯ ತಾಯಿಯ ಬಗ್ಗೆ ಚಿತ್ರಿಸಲಾದ ಎಐ ವಿಡಿಯೋ ಅವಹೇಳನಕಾರಿಯಾಗಿತ್ತು, ಈ ವಿಡಿಯೋ ತೆಗೆದುಹಾಕಲು ಪಾಟ್ನಾ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಅಸ್ಸಾಂ ಬಿಜೆಪಿಯ ಅಸಹ್ಯಕರ ವೀಡಿಯೊಗೂ ಇದೇ ತತ್ವವನ್ನು ಅನುಸರಿಸಬೇಕು. ಮುಸ್ಲಿಂ ನಾಗರಿಕರನ್ನು ಅಪಾಯಕಾರಿ ಎಂದು, ನಿರಂತರವಾಗಿ ಚಿತ್ರಿಸುವುದು ಮಾನಹಾನಿಕರ ಮಾತ್ರವಲ್ಲ, ನರಮೇಧವೂ ಆಗಿದೆ ಎಂದು ಓವೈಸಿ ಆರೋಪಿದ್ದಾರೆ.

ಈ ವಿಡಿಯೋ ಕೋಮು ದ್ವೇಷ ಹರಡುತ್ತಿದೆ ಎಂದ ವಿಪಕ್ಷಗಳು

ಅಸ್ಸಾಂ ಬಿಜೆಪಿ ತನ್ನ ಎಕ್ಸ್​ ಪೋಸ್ಟ್​ ಮಾಡಿರುವ ಬಿಜೆಪಿ ಇಲ್ಲದೆ ಅಸ್ಸಾಂ ಎಂಬ ಶೀರ್ಷಿಕೆಯ AI ಆಧಾರಿತ ವೀಡಿಯೊವನ್ನು ತನ್ನ ಪೋಸ್ಟ್ ಮಾಡಿತ್ತು. ಈ ನಿಲುವು ವಿರೋಧ ಪಕ್ಷಗಳ ಖಂಡನೆಗೆ ಕಾರಣವಾಗಿದೆ. ಈ ಕ್ಲಿಪ್‌ನಲ್ಲಿ ಮುಸ್ಲಿಮರು ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವವರನ್ನು ಅಕ್ರಮ ವಲಸಿಗರು ಎಂದು ಚಿತ್ರಿಸಲಾಗಿದೆ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಗೌರವ್ ಗೊಗೊಯ್ ಅವರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸುವಂತಹ ದೃಶ್ಯಗಳನ್ನು ಸಹ ಒಳಗೊಂಡಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಖಾನ್, ಅಸ್ಸಾಂ ಬಿಜೆಪಿ ಘಟಕವು ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಅನ್ನು ಕೋಮು ದ್ವೇಷವನ್ನು ಹುಟ್ಟುಹಾಕಲು ಚಿತ್ರಿಸುವ ನಕಲಿ, ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಹರಡುವ ಮೂಲಕ ರಾಜಕೀಯ ಪ್ರಚಾರದ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ನಿಮ್ಮ ವಿಷಕಾರಿ ಅಭಿಯಾನಕ್ಕೆ ಅಸ್ಸಾಂನ ಜನರು ಸರಿಯಾದ ಉತ್ತರವನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಒತ್ತಾಯ

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ​, ಈ ವಿಷಯದಲ್ಲಿ ಭಾರತೀಯ ಚುನಾವಣಾ ಆಯೋಗ ಕೂಡ ಹೊಣೆಗಾರಿಕೆ ವಹಿಸಬೇಕೆಂದು ಒತ್ತಾಯಿಸಿದೆ. ಇಸಿಐ ಕ್ರಮ ಕೈಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಈ ರೀತಿ ವಿಷ ಹರಡುತ್ತಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೀವು ಯಾವಾಗಲೂ ಹಾಗೆ ಮೂಕ ಪ್ರೇಕ್ಷಕರಾಗಿ ಉಳಿದು ಇದನ್ನು ಸಮರ್ಥಿಸುತ್ತೀರಾ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ. (ಏಜೆನ್ಸೀಸ್)