ಬೆಂಗಳೂರು: ತತ್ವ-ಸಿದ್ಧಾಂತದ ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಮೆಂಟರ್’, ಆಡಳಿತಕ್ಕೆ ಮಾರ್ಗದರ್ಶನದ ಜವಾಬ್ದಾರಿ ಹೊತ್ತವರೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವೆಂಬ ಅ‘ಸಂತೋಷ’ ಬಿಜೆಪಿಯಲ್ಲಿ ಮಡುಗಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಸ್ಪೋಟಿಸುವ ಸಾಧ್ಯತೆಗಳಿವೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಜವಾಬ್ದಾರಿ ನಿರ್ವಹಿಸುವ ನೆಪವೊಡ್ಡಿ, ಪ್ರತಿಯೊಂದರಲ್ಲಿ ‘ಶಕ್ತಿ’ಪ್ರದರ್ಶನಕ್ಕೆ ಮುಂದಾದದ್ದು ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಲಸ ಬಿಟ್ಟು ಉಳಿದೆಲ್ಲವನ್ನೂ ನಿಭಾಯಿಸುತ್ತಿದ್ದು, ಸಂಘಟನಾ ಬಲ ಇನ್ನಷ್ಟು ಕುಸಿಯುವ ಮುನ್ನ ಸಂಘದ ಸೇವೆಗೆ ಮರಳಿ ಕರೆಯಿಸಿಕೊಳ್ಳಬೇಕು ಎಂದು ಕೇಳಿಬರುತ್ತಿದ್ದ ಸಣ್ಣಧ್ವನಿಗೆ ಚುನಾವಣೆ ಸೋಲು ಬಲ ತುಂಬಿದೆ ಎಂದು ಮೂಲಗಳು ತಿಳಿಸಿವೆ.
- ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ
- ಸೋತ ಲಕ್ಷ್ಮಣ ಸವದಿ ಜತೆ ಮತ್ತಿಬ್ಬರಿಗೆ ಡಿಸಿಎಂ ಹುದ್ದೆ ಕಲ್ಪಿಸಿ, ಬಿಎಸ್ವೈ ಮೇಲೆ ನಿಯಂತ್ರಣದ ಪ್ರಯತ್ನ
- ಬಿಎಸ್ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ, ವಿ. ಸುನಿಲ್ಕುಮಾರ್ ಪತ್ರ, ರಾಜ್ಯಪಾಲರಿಗೆ ಪತ್ರ ಬರೆಯಲು ಈಶ್ವರಪ್ಪಗೆ ಒತ್ತಾಸೆ.
- ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಆಂತರಿಕವಾಗಿ ಒತ್ತಡ
- ಪಕ್ಷದ ಮೇಲೆ ಹಿಡಿತವಿಟ್ಟುಕೊಳ್ಳಲು ಹಾಲಿ ಅಧ್ಯಕ್ಷರ ಮುಂದುವರಿಕೆ, ಆಪ್ತರಿಗೆ ಪದಾಧಿಕಾರಿಗಳ ಹುದ್ದೆ, ಚುನಾವಣೆ ಸಮೀಪವಿರುವಾಗ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬದಲಾವಣೆ
- ಸಿಎಂ ಬೊಮ್ಮಾಯಿಗೂ ಮುಕ್ತವಾಗಿ ಕಾರ್ಯನಿರ್ವಹಿಸದಂತೆ ಅಡಚಣೆ, ಸಚಿವ ಸಂಪುಟ, ನಿಗಮ- ಮಂಡಳಿಗಳ ನೇಮಕದಲ್ಲಿ ಹಸ್ತಕ್ಷೇಪ
- ಪಕ್ಷದೊಳಗೆ ಬಣಗಳ ಸೃಷ್ಟಿ, ಪರಸ್ಪರ ಕಾಲೆಳೆಯುವ ತಂತ್ರಗಾರಿಕೆ, ವರಿಷ್ಠರಿಗೆ ಮತ್ತೊಂದು ಬಣದ ವಿರುದ್ಧ ದೂರು ಸಲ್ಲಿಕೆಗೆ ಕುಮ್ಮಕ್ಕು
- ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಂಪುಗಾರಿಕೆ, ಬಿಎಸ್ವೈ ಮತ್ತಿತರರು ಮುಂದಿಟ್ಟ ಪಟ್ಟಿಗೆ ವಿರುದ್ಧವಾಗಿ ಇನ್ನೊಂದು ಪಟ್ಟಿ ಸೃಷ್ಟಿ
- ಸಿ.ಟಿ.ರವಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇಮಕದ ನಂತರ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಲು ಒಳಗೊಳಗೆ ಪ್ರಯತ್ನ