ನವದೆಹಲಿ: ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತು ಆಡಳಿತ ಪಕ್ಷದ ಭ್ರಷ್ಟಾಚಾರವು ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 43 ನೇಮಕಾತಿ ಪರೀಕ್ಷೆಗಳ ಪೇಪರ್‌ಗಳು ಸೋರಿಕೆಯಾಗಿವೆ. ಬಿಜೆಪಿ ಆಡಳಿತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಮ್ಮ ದೇಶದ ರಾಷ್ಟ್ರೀಯ ಸಮಸ್ಯೆಯಾಗಿ ಇದುವರೆಗೆ ಕೋಟ್ಯಂತರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಭಾರತವು ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿಎ. ನಮ್ಮ ಯುವಕರನ್ನು ಸಮರ್ಥರನ್ನಾಗಿ ಮಾಡುವ ಬದಲು ಬಿಜೆಪಿ ಸರ್ಕಾರ ಅವರನ್ನು ದುರ್ಬಲರನ್ನಾಗಿ ಮಾಡುತ್ತಿದೆ. ಕೋಟ್ಯಂತರ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಅವರ ಪಾಲಕರು ಶಿಕ್ಷಣದ ವೆಚ್ಚದ ಹೊರೆಯನ್ನು ಹೊರುತ್ತಾರೆ ಎಂದು ಅವರು ಹೇಳಿದರು. ಮಕ್ಕಳು ವರ್ಷಗಳ ಕಾಲ ಖಾಲಿ ಹುದ್ದೆಗಳಿಗಾಗಿ ಕಾಯುತ್ತಾರೆ. ನೇಮಕಾತಿ ಬಂದಾಗ ಫಾರ್ಮ್ ತುಂಬುವ ಖರ್ಚು, ಪರೀಕ್ಷೆಗೆ ಹೋಗುವ ಖರ್ಚು, ಕೊನೆಗೆ ಸಂಪೂರ್ಣ ಶ್ರಮ ಭ್ರಷ್ಟಾಚಾರದತ್ತ ಸಾಗುತ್ತದೆ. ಬಿಜೆಪಿಯ ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಯುಜಿ) 2024ರಲ್ಲಿನ ಅಕ್ರಮಗಳ ತನಿಖೆಯನ್ನು ಸುಪ್ರೀಂಕೋರ್ಟ್ನ ಹಾಲಿ ನ್ಯಾಯಧೀಶರ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಒತ್ತಾಯಿಸಿದರು. (ಏಜೆನ್ಸೀಸ್)