ದಿನೇಶ್​ ಗುಂಡೂರಾವ್​ 
ನ್ಯೂಸ್

ಸಿಎಂಗೆ ಕಳಂಕ ತರಲು ಬಿಜೆಪಿ ಪ್ರಯತ್ನ

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪು$್ಪ ಮಾಡದೆ ಇರುವುದಕ್ಕೆನೇ ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದಲ್ಲಿ ಕ್ಲೀನ್​ ಚಿಟ್​ ನೀಡಿದ್ದಾರೆ. ಸಿಬಿಐ, ಇಡಿ ತನಿಖೆ ಎದುರಿಸಲೂ ಅವರು ಸಿದ್ಧರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ತನಿಖೆಗೆ ಹೆದರುವ ಪ್ರಶ್ನೆಯಿಲ್ಲ, ಸಿಬಿಐ, ಐಟಿ ತನಿಖೆಗೆ ಬಿಜೆಪಿಯವರು ಈ ಮೊದಲು ಎಷ್ಟು ಕೇಸ್​ ನೀಡಿದ್ದರು, ಸಿಎಂ ಹೆಸರಿಗೆ ಕಳಂಕ ತರಲು ಕೇಂದ್ರ ಸರ್ಕಾರದಿಂದ ಬಿಜೆಪಿ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.

ಮೊದಲೇ ಲೋಕಾಯುಕ್ತದಿಂದ ಕ್ಲೀನ್​ ಚಿಟ್​ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಸಿದ್ದರಾಮಯ್ಯ ಅವರು ತಪು$್ಪ ಮಾಡಿಲ್ಲ ಅನ್ನೋ ನಂಬಿಕೆ ಇತ್ತು. ಮುಡಾ ಪ್ರಕರಣ ಸಿಬಿಐಗೆ ನೀಡುವಂತೆ ಆಗ್ರಹಿಸಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣ ಸಹ ಸಿಬಿಐಗೆ ನೀಡಿಲ್ಲ, ಬಿಜೆಪಿಗೆ ಒಂದು, ಬೇರೆಯವರಿಗೆ ಒಂದು ಮಾನದಂಡನಾ ಎಂದು ಪ್ರಶ್ನಿಸಿದರು.

ಎಲ್ಲಾದರೂ ಇಡಿ, ಐಟಿ, ಸಿಬಿಐನಿಂದ ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿದ್ದಾರಾ?, ಬಿಜೆಪಿಯವರು ಭ್ರಷ್ಟರು ಅಂತ ಸರ್ಟಿಫಿಕೇಟ್​ ಈಗಾಗಲೇ ಕೊಡಲಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್​ಗೆ ಸೇರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಒಳ ಜಗಳಕ್ಕೆ ಕಾಂಗ್ರೆಸ್​ ಮನೆಗೆ ಯಾಕೆ ತರ್ತಿರಾ, ಬಿಜೆಪಿ ಒಡೆದ ಮನೆಯಾಗಿದೆ ಎಂದು ವ್ಯಂಗ್ಯವಾಡಿದರು.

ನಾನು ಯಾರನ್ನೂ ಸಂಪರ್ಕ ಮಾಡಿಲ್ಲ ಅಂತ ಶ್ರೀರಾಮುಲು ಅವರೇ ಹೇಳಿದ್ದಾರೆ. ಅವರನ್ನು ಕಾಂಗ್ರೆಸ್​ಗೆ ಕರೆತರುವ ಕೆಲಸವನ್ನೂ ಮಾಡಿಲ್ಲ, ಜನಾರ್ಧನರೆಡ್ಡಿನ ಪಕ್ಷಕ್ಕೆ ಏಕೆ ಸೇರ್ಪಡೆ ಮಾಡಿಕೊಂಡೆವೋ ಅನ್ನೋ ಭಾವನೆ ಬಿಜೆಪಿಗೆ ಬಂದಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್​ಗೆ ಹಿರಿಯ, ಕಿರಿಯ ನಾಯಕರು ಯಾರೇ ಬಂದರು ಸ್ವಾಗತಿಸುತ್ತೇವೆ. ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಗೊತ್ತಿಲ್ಲ, ಸಿಎಂನ ಕೇಳಿ ಎಂದು ತಿಳಿಸಿದರು.