ನ್ಯೂಸ್

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಪಕ್ಷದ ರಾಜ್ಯ ತಂಡದಿಂದ ವಸ್ತುಸ್ಥಿತಿ ಪರಾಮರ್ಶೆ

ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ವಸ್ತುಸ್ಥಿತಿ ಮಾಹಿತಿ ಸಂಗ್ರಹಿಸಲು ಪಕ್ಷದ ತಂಡ ಸ್ಥಳಕ್ಕೆ ಭಾನುವಾರ ಖುದ್ದು ಭೇಟಿ ನೀಡಲಿದೆ.

ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ 12ಜನರನ್ನು ಒಳಗೊಂಡ ತಂಡವನ್ನು ಸಾಕ್ಷಾತ್ ಭೇಟಿಗೆ ಪಕ್ಷದ ರಾಜ್ಯಾಧ್ಯಕ್ಷ ನೇಮಿಸಿದ್ದಾರೆ. ಈ ತಂಡವು ಸ್ಥಳದ ಮಾಹಿತಿ ಕಲೆಹಾಕಿದ ನಂತರ ಪಕ್ಷದ ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಿದೆ.

ಸಂಸದ ಡಾ.ಉಮೇಶ್ ಜಾಧವ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ರಘುನಾಥರಾವ್ ಮಲ್ಕಾಪುರೆ, ಬಸವರಾಜ ಮತ್ತೀಮೂಡ್, ಶಶೀಲ್ ನಮೋಶಿ, ಶರಣು ಸಲಗಾರ್, ಬಿ.ಜಿ.ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಪಕ್ಷದ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ ಅವರ ತಂಡವು ಸ್ಥಳಕ್ಕೆ ಭೇಟಿ ನೀಡಲಿದೆ.

ಸಚಿವರ ಕಿರುಕುಳ ಆರೋಪ

ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಕಿರುಕುಳದಿಂದ ಪಕ್ಷದ ಕಾರ್ಯಕರ್ತ ಶಿವಕುಮಾರ್ ನೊಂದು, ಬೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಅವರ ಮನೆಗೆ ಹೋಗಿ ಒತ್ತಡ ತಂದು, ಅವರ ಪತ್ನಿಯಿಂದ ‘ನನ್ನ ಗಂಡ ಸಾಲ ಮಾಡಿದ್ದರು, ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ಕೊಡುವಂತೆ ಮಾಡಿದ್ದಾರೆ ಎನ್ನುವುದು ಬಿಜೆಪಿ ಆರೋಪವಾಗಿದೆ.

ಮಾಡಿದ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಹಣ ಬಿಡುಗಡೆ ವಿಳಂಬ, ತಂದೆ ಜತೆ ಜಮೀನಿನಲ್ಲಿದ್ದ ವೇಳೆ ಸಾಕಷ್ಟು ಜನರಿಂದ ಹಲ್ಲೆ, ಮಾಡಿದ್ದರಿಂದ ಶಿವಕುಮಾರ್ ನೊಂದಿದ್ದರು. ಡಾ.ಶರಣ ಪ್ರಕಾಶ್ ಪಾಟೀಲರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಡಿಯೋ ರೆಕಾರ್ಡ್ ಕೂಡ ಇದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.