ನ್ಯೂಸ್

ಬೆಂಗಳೂರಿಂದ ಬಳ್ಳಾರಿಗೆ ಬಿಜೆಪಿ ವಾಲ್ಮೀಕಿ ಪಾದಯಾತ್ರೆ

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ವಿರೋಧಿಸಿ ನಡೆದ ಪಾದಯಾತ್ರೆ ಬಳಿಕ ಇದೀಗ ಮತ್ತೊಂದು ಪಾದಯಾತ್ರೆಗೆ ಬಿಜೆಪಿ ಸಜ್ಜಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಆರ್ಥಿಕ ಅಕ್ರಮವ ವಿರುದ್ಧ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಹೋರಾಡಲು ಬಿಜೆಪಿ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಈ ಕುರಿತು ಮಾಹಿತಿ ನೀಡಿದರು.

ಹೈಕಮಾಂಡ್ ನಮಗೆ ಸಲಹೆ ನೀಡಿದೆ. ನಾವೂ ಕೂಡ ವಾಲ್ಮೀಕಿ ಹಗರಣದ ವಿಚಾರದಲ್ಲಿ ಪಾದಯಾತ್ರೆ ಮಾಡುತ್ತೇವೆ. ವಾಲ್ಮೀಕಿ ಹಗರಣದಲ್ಲಿ ನಮ್ಮ 2ನೇ ಹಂತದ ಹೋರಾಟ ಶುರುವಾಗಲಿದೆ. ಅದು ಯತ್ನಾಳ್ ಪಾದಯಾತ್ರೆ ಎಂದಲ್ಲ. ಬಿಜೆಪಿ ಪಾದಯಾತ್ರೆ. ಪಾದಯಾತ್ರೆ ದಿನಾಂಕ ಮತ್ತು ಸ್ವರೂಪದ ಬಗ್ಗೆ ಬಿಜೆಪಿ ನಾಯಕರೆಲ್ಲ ಕುಳಿತು ಚರ್ಚೆ ಮಾಡುತ್ತೇವೆ. ನಮ್ಮೆಲ್ಲ ಸ್ನೇಹಿತರೂ ಕೂಡ ವಾಲ್ಮೀಕಿ ಪಾದಯಾತ್ರೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರು ದಲಿತ ವಿರೋಧಿಗಳು...:ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕಾದಲ್ಲಿದ್ದು ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ; ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮೀಸಲಾತಿ ವಿಚಾರದಲ್ಲಿ ನೆಹರೂ ಅವರ ಮನೋಭಾವವನ್ನೇ ರಾಹುಲ್ ಅವರೂ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ಸಿಗರು ಹೇಳೋದೊಂದು ಮಾಡೋದೊಂದು. ಮೀಸಲಾತಿಗೆ ವಿರುದ್ಧವಾಗಿಯೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವರು ಓಲೈಕೆ ಮಾಡಿ ಈ ರೀತಿ ಮಾಡುತ್ತಿದ್ದರು ಎಂದು ನಾರಾಯಣಸ್ವಾಮಿ ಟೀಕಿಸಿದರು.

ಸಿಎಂ ರಾಜೀನಾಮೆಗೆ ಆಗ್ರಹ: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ವಿಚಾರದಲ್ಲಿ ಮಾಜಿ ಸಚಿವ ನಾಗೇಂದ್ರ ಪಾತ್ರ ಇರುವುದು ಈಗ ಹೊರಬಿದ್ದಿದೆ. ಶಾಸಕ ದದ್ದಲ್ ಅವರನ್ನ ಪ್ರಕರಣದ ಚಾರ್ಜ್​ಶೀಟ್​ನಿಂದ ಹೊರಬಿಟ್ಟಿದ್ದು ಯಾಕೆ? ಇಷ್ಟೆಲ್ಲ ಆರೋಪ ಬಂದಾಗಲೂ ಸಿಎಂ ಖುರ್ಚಿಯಲ್ಲಿರೋದು ಸರಿಯಲ್ಲ. ಅವರು ರಾಜೀನಾಮೆ ನೀಡಲಿ. ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಭಂಡ ಧೈರ್ಯ ಮಾಡುತ್ತಿದ್ದು, ಇದು ಸರಿಯಲ್ಲ. ನೈತಿಕತೆಯ ಹಿನ್ನೆಲೆಯಲ್ಲಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.

ರಾಹುಲ್ ​ಗಾಂಧಿ ವಿರುದ್ಧ ಚಳವಳಿ

ಬೆಂಗಳೂರು: ಮೀಸಲಾತಿ ರದ್ದು ಮಾಡಲಾಗುವುದು ಎಂದು ಅಮೆರಿಕದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿರುವುದನ್ನು ಬಿಜೆಪಿ ಖಂಡಿಸಿ, ರಾಜ್ಯಾದ್ಯಂತ ಚಳವಳಿ ಹೂಡಲು ತೀರ್ವನಿಸಿದೆ. ಮೀಸಲಾತಿ ಮೂಲಕ ಏಳಿಗೆ ಕಂಡ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯವು ಈ ಹೇಳಿಕೆಯಿಂದ ಗಾಬರಿಯಾಗಿದೆ. ಮೀಸಲಾತಿ ರದ್ದು ಮಾಡುವುದಕ್ಕೆ ಬಿಜೆಪಿ ಬಿಡುವುದಿಲ್ಲ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್​ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್​ನ ಮೀಸಲಾತಿ ವಿರೋಧಿ ಎಂಬ ವಿಷಯವನ್ನು ಇಟ್ಟುಕೊಂಡು ರಾಜ್ಯಾದ್ಯಂತ ಗುರುವಾರದಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಪ್ರತಿಕೃತಿ ದಹನ: ಮೀಸಲಾತಿ ರದ್ದುಪಡಿಸುವುದಾಗಿ ನೀಡಿದ ಹೇಳಿಕೆ ಖಂಡಿಸಿ, ರಾಜ್ಯದಲ್ಲಿ ಎರಡು ದಿನಗಳ ಕಾಲ ರಾಹುಲ್ ಗಾಂಧಿ ಪ್ರತಿಕೃತಿ ದಹನ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು. ಮೀಸಲಾತಿ ಎನ್ನುವುದು ಕಾಂಗ್ರೆಸ್ ಪಕ್ಷದ ಭಿಕ್ಷೆಯಲ್ಲ, ಎಸ್​ಸಿ ಎಸ್​ಟಿ ಸಮುದಾಯಗಳ ಹಕ್ಕು. ದಲಿತರನ್ನು ವೋಟ್ ಬ್ಯಾಂಕ್​ನಂತೆ ಬಳಸಿಕೊಂಡವರು, ಈ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ತುಕಾರಾಮ್ ಗೆಲುವು ಪ್ರಶ್ನಿಸಿ ದಾವೆ

ಸಂಡೂರು(ಬಳ್ಳಾರಿ): ಬಳ್ಳಾರಿ ಕ್ಷೇತ್ರದ ಲೋಕಸಭಾ ಚುನಾವಣೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ 20.19 ಕೋಟಿ ರೂ. ಬಳಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಈ ಮೂಲಕ ಕಾಂಗ್ರೆಸ್ ಚುನಾವಣೆಯಲ್ಲಿ ಹಣ, ಹೆಂಡ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್ ಅಗರ್ವಾಲ್ ಟೀಕಿಸಿದರು. ಎಸ್ಟಿ ಸಮುದಾಯದ ಅನುದಾನ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ತುಕಾರಾಮ್ ಗೆಲುವು ಸಾಧಿಸಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಹೈಕೋರ್ಟ್​ನಲ್ಲಿ ದಾವೆ ಹೂಡಲಿದ್ದಾರೆ.

1975ರಲ್ಲಿ ಇದೇ ರೀತಿ ಹಣ, ಹೆಂಡ ಹಂಚಿ ಗೆದ್ದಿದ್ದ ಇಂದಿರಾ ಗಾಂಧಿ ವಿರುದ್ಧ ನ್ಯಾಯಾಲಯಕ್ಕೆ ಹೋದಾಗ ಅವರ ಸಂಸತ್ ಸದಸ್ಯತ್ವ ರದ್ದುಗೊಂಡಿತ್ತು ಎಂದು ಸ್ಮರಿಸಿದರು. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ ಬದಲಿ ನಿವೇಶನ ಪಡೆದು ಸುಮಾರು 4000 ಕೋಟಿ ರೂ. ಹಗರಣ ಮಾಡಿದ್ದಾರೆ. ಖರ್ಗೆ ಕುಟುಂಬದವರ ಹೆಸರಲ್ಲೂ ಐದು ಎಕರೆ ಜಮೀನು ಪಡೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದ ವೈ.ದೇವೇಂದ್ರಪ್ಪ ಇತರರಿದ್ದರು.