ನ್ಯೂಸ್

ಜನರ ಗಮನಸೆಳೆಯಲು ಪ್ರಚಾರಕ್ಕೆ ವಿಡಿಯೋ, ರೀಲ್ಸ್ ಸ್ಪರ್ಶ ನೀಡಿದ ಬಿಜೆಪಿ

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ವಿಭಿನ್ನ ಸ್ವರೂಪ ನೀಡುವ ಜತೆಗೆ ಜನರ ಹತ್ತಿರಕ್ಕೆ ತಲುಪುಲು ಮತ್ತಷ್ಟು ವೇಗ ಹೆಚ್ಚಿಸಲಾಗಿದೆ ಎಂದು ಪಕ್ಷದ ರಾಜ್ಯ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್ ಹೇಳಿದರು.

ಪಕ್ಷದ ರಾಜ್ಯ ಕಚೇರಿ ಮುಂದೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋ ಹಾಗೂ ರೀಲ್‌ಗಳ ತುಣುಕುಗಳನ್ನು ಗುರುವಾರ ಬಿಡುಗಡೆ ಮಾಡಿದ ಅವರು ಮಾತನಾಡಿ ಸುರಕ್ಷಿತ, ಸಾಂಸ್ಕೃತಿಕ ಹಾಗೂ ವಿಕಸಿತ ಭಾರತ ಎಂಬ ಮೂರು ವಿಷಯಗಳನ್ನು ಮುಂದಿಟ್ಟು ಈ ಬಾರಿ ಲೋಕಸಭೆ ಚುನಾವಣೆಯನ್ನು ಪಕ್ಷ ಎದುರಿಸುತ್ತಿದೆ.

ಪ್ರಮುಖ ಮೂರು ವಿಷಯಗಳ ಆಧರಿತ ಆಡಿಯೋ, ವಿಡಿಯೋಗಳು, ರೀಲ್‌ಗಳನ್ನು ಅಖಾಡದಲ್ಲಿ ಪ್ರದರ್ಶಿಸುವ ಜತೆಗೆ ಸಾರ್ವಜನಿಕ ಸಭೆ ವೇಳೆ ಬಳಸಿಕೊಳ್ಳಲಾಗುವುದು. ಪಕ್ಷದ ವಿವಿಧ ಸಭೆಗಳಲ್ಲೂ ಉಪಯೋಗಿಸಲಿದ್ದು, ಸಾಮಾಜಿಕ ಜಾಲ ತಾಣಗಳಲ್ಲೂ ಹಂಚಿಕೆ ಮಾಡಿ ಹೆಚ್ಚು ಜನರನ್ನು ಕಡಿಮೆ ಸಮಯದಲ್ಲಿ ಮುಟ್ಟುವ ಗುರಿ ಹೊಂದಲಾಗಿದೆ ಎಂದರು.

ಸಾಧನೆ, ವೈಫಲ್ಯ ಅನಾವರಣ

ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಸಾಧನೆ, ವಿವಿಧ ಯೋಜನೆಗಳ ಯಶೋಗಾಥೆ ಕುರಿತು ವಿಡಿಯೋ, ರೀಲ್‌ಗಳು, ಆಡಿಯೋ, ಯಕ್ಷಗಾನ ಮತ್ತಿತರ ಜಾನಪದ ಕಲಾ ಪ್ರಕಾರಗಳನ್ನು ಬಳಸಿಕೊಂಡು ಕಲಾವಿದರ ತಂಡ ಸೃಜಿಸಿದೆ ಎಂದು ವಿ.ಸುನಿಲ್‌ಕುಮಾರ್ ತಿಳಿಸಿದರು.

ಜಾಗತಿಕವಾಗಿ ದೇಶದ ಘನತೆ-ಗೌರವ ಹೆಚ್ಚಿಸಿದ ಮೋದಿಯವರ ಕುರಿತು ಹೆಮ್ಮೆಯ ಪುತ್ರ ಎಂಬ ವಿಡಿಯೋ ತುಣುಕಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹರಿಕಥೆ ರೂಪದಲ್ಲಿ ಒಂದೆರಡು ನಿರ್ಮಿಷಗಳಲ್ಲಿ ಅನಾವರಣಗೊಳಿಸಿದ್ದು, ಜನರೂ ಅರ್ಥ ಮಾಡಿಕೊಳ್ಳುವ ವಿಶ್ವಾಸವಿದೆ ಎಂದರು.

ಆಡು ಭಾಷೆಯಲ್ಲಿ ವಿಡಿಯೋ ತುಣುಕುಗಳಿವೆ. ಬಹುಬೇಗ, ಪರಿಣಾಮಕಾರಿ ಎಂದು ಪ್ರಚಾರಕ್ಕೆ ಈ ತಂತ್ರ ಬಳಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ 10ಕ್ಕೂ ಹೆಚ್ಚು ವಿಡಿಯೋ ತುಣುಕುಗಳು ಪಕ್ಷದ ಚುನಾವಣಾ ಪ್ರಚಾರದ ಬತ್ತಳಿಕೆಗೆ ಸೇರಲಿವೆ ಎಂದು ವಿ.ಸುನಿಲ್‌ಕುಮಾರ್ ಹೇಳಿದರು.