ನ್ಯೂಸ್

ಬಸ್ ದರ ಏರಿಕೆ ಖಂಡಿಸಿ ಬಿಜೆಪಿ ವಿಶಿಷ್ಟ ಪ್ರತಿಭಟನೆ |Burden of price hike on people in the name of guarantee

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ನಾಯಕರ ದಂಡು ಧಾವಿಸಿತು. ಸಾರಿಗೆ ನಿಗಮಗಳ ಬಸ್ ಪ್ರಯಾಣ ಶೇಕಡ 15ರಷ್ಟು ಹೆಚ್ಚಳ ಖಂಡಿಸಿ, ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಬಿಜೆಪಿ ನಾಯಕರು ವಿಶಿಷ್ಟವಾಗಿ ಪ್ರತಿಭಟಿಸಿದರು.

ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನೇರವಾಗಿ ಪುರುಷ ಪ್ರಯಾಣಿಕರ ಬಳಿಗೆ ತೆರಳಿ ಗುಲಾಬಿ ಹೂ ನೀಡಿದರೆ, ಪಕ್ಕದಲ್ಲಿದ್ದ ಮಹಿಳೆಯರು ಅಚ್ಚರಿಯಿಂದ ಗಮನಿಸಿ, ವಿಷಯ ತಿಳಿದ ಮೇಲೆ ನಸುನಕ್ಕರು.

ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿ, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟ ನಾಯಕರು ತಮ್ಮ ಪ್ರತಿಭಟನೆಯ ಉದ್ದೇಶ ಮನವರಿಕೆ ಮಾಡಿಕೊಟ್ಟರು.

ಸರ್ಕಾರದ ಪರವಾಗಿ ಕ್ಷಮೆ

'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಸರ್ಕಾರ, ಬಸ್ ದರ ಏರಿಸಿ ಪುರುಷ ಪ್ರಯಾಣಿಕರಿಗೆ ಬರೆ ಹಾಕಿದೆ. ಇದಕ್ಕಾಗಿ ಸರ್ಕಾರವಂತೂ ಕ್ಷಮೆ ಕೇಳುವುದಿಲ್ಲ. ಪ್ರತಿಪಕ್ಷವಾಗಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಹೆಸರಿಗಷ್ಟೇ ಉಚಿತ ಪ್ರಯಾಣ, ಗ್ಯಾರಂಟಿಗಳ ಸೌಲಭ್ಯ ಸರ್, ಬೇರೆ ದರಗಳನ್ನು ಹೆಚ್ಚಿಸಿ ಪರೋಕ್ಷವಾಗಿ ಹಣ ಕಿತ್ತುಕೊಳ್ಳುತ್ತಿದೆ. ಡೀಸೆಲ್, ಪೆಟ್ರೋಲ್, ಬೇರೆ ತೆರಿಗೆ ದರ ಹೆಚ್ಚು ಮಾಡಿದೆ ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡರು.

ಜನಪರವಾಗಿ ಹೀಗೆಯೇ ಧ್ವನಿ ಎತ್ತುವ ಕೆಲಸ ಮಾಡಿ, ಬಿಜೆಪಿ ಪರವಾಗಿ ಜನರು ನಿಲ್ಲುತ್ತಾರೆ. ಇಷ್ಟೊಂದು ಸಾಫ್ಟ್ ಆಗಿ ಪ್ರತಿಭಟನೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸೀತೆ ? ಎಂದು ಕೆಲವು ಪ್ರಯಾಣಿಕರು ಮೆಲು ದನಿಯಲ್ಲಿ ಕೇಳಿದರು.

ಇನ್ನಷ್ಟು ಬೆಲೆ ಏರಿಕೆ ಕಾದಿವೆ

ಹೊಸ ಕ್ಯಾಲೆಂಡರ್ ವರ್ಷದ ಎರಡನೇ ದಿನವೇ ರಾಜ್ಯ ಸರ್ಕಾರ ಬಸ್ ದರ ಏರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆಗಳು ಏರಿಕೆ ಕಾದಿವೆ. ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ನಿಲ್ಲಿಸಿ, ಜ‌ನರ ಬದುಕು ದುಬಾರಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ವಿದ್ಯುತ್, ನೀರು, ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ಇನ್ನಿತರ ಬೆಲೆಗಳ ಏರಿಕೆಗೆ ಸಮಾಧಾನವಾಗದೆ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿತು. ಇದೀಗ ಬಸ್ ದರ ಹೆಚ್ಚಿಸಿ ಜನರಿಗೆ ಟೋಪಿ ಹಾಕಿದೆ ಎಂದು ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.