ಬೆಂಗಳೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿತವೆಂಬ ಬಿಜೆಪಿ ಟೀಕೆ ಸಲ್ಲದು(BJP's criticism of law and order collapse in the state is not worthy) . ಬೇಕಿದ್ದರೆ ಬಿಜೆಪಿ ಆಡಳಿತಾವಧಿಯ ಅಪರಾಧ ಪ್ರಕರಣಗಳ ಪಟ್ಟಿ ಕೊಡುವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(Dr G.Parameswar) ಸವಾಲು ಹಾಕಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಬಹಳ ಚೆನ್ನಾಗಿದೆ. ದರೋಡೆ, ಕೊಲೆ ಆಗುತ್ತೆ ಎನ್ನುವುದು ಮೊದಲೇ ಗೊತ್ತಾದರೆ
ಅದನ್ನು ಆಗಲು ಬಿಡುವುದಿಲ್ಲ. ಬ್ಯಾಂಕ್ ದರೋಡೆ ಆಗುವಾಗ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಆಗುವಾಗ ಆರ್ಮ್‌ಗಾರ್ಡ್ ಇರಲಿಲ್ಲ. ಕೆಲ ನ್ಯೂನತೆ ಇರುವುದರಿಂದ ಹೀಗಾಗಿದೆ. ಇದೇ ಕಾರಣಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನಲು ಆಗುವುದಿಲ್ಲ ಎಂದು ಹೇಳಿದರು.
ಬಿಜೆಪಿಯವರ ಕಾಲದಲ್ಲಿ ಆದ ಪ್ರಕರಣದ ಅಂಕಿ-ಅಂಶ ಬಿಡುಗಡೆ ಮಾಡುತ್ತೇವೆ. ಪಾಪ, ಬಿಜೆಪಿಯವರು ಎಲ್ಲವನ್ನ ಮರೆತಿರಬೇಕು. ಸಂದರ್ಭ ಬಂದರೆ ಎಲ್ಲ ಅಂಕಿ-ಅಂಶ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದರು.
ರಾಜಕೀಯ ವಿಚಾರ ಮಾತನಾಡುವುದಿಲ್ಲ. ಎಐಸಿಸಿ ಅಧ್ಯಕ್ಷರು ನಮಗೆ ಮಾತಾಡಬೇಡಿ, ಕೆಲಸ ಮಾಡಿ ಎಂದಿದ್ದಾರೆ. ಹಾಗಾಗಿ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮುಡಾ ಕೇಸ್‌ನಲ್ಲಿ ಇಡಿ ಸೈಟ್ ಮುಟ್ಟುಗೋಲು ಹಾಕಿಕೊಂಡಿರುವ ಕುರಿತ ಪ್ರಶ್ನೆಗೆ, ಇಡಿ ಅವರ ಮುಟ್ಟುಗೋಲು ವಿಚಾರ ನೋಡಿದ್ದೇನೆ. ಅದರಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೇಳಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಹಿಂದೆಯೂ ಒತ್ತಾಯ ಮಾಡಿದ್ದರು. ಈಗಲೂ ಒತ್ತಾಯ ಮಾಡಿದ್ದಾರೆ ಅಷ್ಟೇ. ಇದೇನು ಮೊದಲಲ್ಲ. ಆರೋಪ ಮಾಡುವವರು ದಾಖಲಾತಿ ಇಟ್ಟುಕೊಂಡು ಮಾತನಾಡಬೇಕು. ಇಡಿ ಎಲ್ಲಿಯೂ ಸಿದ್ದರಾಮಯ್ಯ ಇನ್‌ಫ್ಲೂಯೆನ್ಸ್ ಮಾಡಿ ಸೈಟ್ ಕೊಡಿಸಿದ್ದಾರೆ ಎಂದು ಹೇಳಿಲ್ಲ ಎಂದು ಡಾ.ಪರಮೇಶ್ವರ ಪ್ರತಿಕ್ರಿಯಿಸಿದರು.