ನ್ಯೂಸ್

ಶತಮಾನದ ತಪ್ಪು ಸರಿಪಡಿಸಿರುವ ಬಿಜೆಪಿ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಬೆಂಗಳೂರು: ಶತಮಾನದಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಎಚ್​ಎಸ್​ಆರ್ ಬಡಾವಣೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಬುದ್ಧರ ಸಮಾವೇಶ ಉದ್ಘಾಟಿಸಿದ ಅವರು, ದೇಶದಲ್ಲಿ ಒಂದು ದ್ವಜದಡಿ ಎಲ್ಲವೂ ಇರಬೇಕು ಎನ್ನುವ ಬಿಜೆಪಿ ನೀತಿಯನ್ನು ಕಾಶ್ಮೀರದಲ್ಲಿ 370 ಆರ್ಟಿಕಲ್ ತೆಗೆಯುವ ಮೂಲಕ ಅನುಷ್ಠಾನಕ್ಕೆ ತರಲಾಗಿದೆ. ಕೆಲ ಕುಟುಂಬಗಳ ಕಪಿ ಮುಷ್ಠಿಯಲ್ಲಿ ಸಿಲುಕಿದ್ದ ಕಾಶ್ಮೀರದಲ್ಲಿ, ಈಗ ನಿಜವಾದ ಪ್ರಜಾಪ್ರಭುತ್ವ ಜಾರಿಯಾಗಿದೆ. ಇದು ಇತಿಹಾಸದಲ್ಲಿ ಉಳಿಯುವ ಮಹತ್ವದ ಘಟನೆ ಎಂದರು.

ಕಾಂಗ್ರೆಸ್ ವೋಟಿನ ರಾಜಕಾರಣ ಮಾಡಿಕೊಂಡು ದೇಶದ ಹಿತ ಕಡೆಗಣಿಸಿದ ಪರಿಣಾಮ ದೇಶ ಹಿಂದುಳಿಯಲು ಕಾರಣ. ತ್ರಿವಳಿ ತಲಾಕ್ ರದ್ದು ಮಾಡಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸುವ ಸಂದರ್ಭದಲ್ಲಿಯೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಿತು ಎಂದು ಟೀಕಿಸಿದರು.

ರಾಮಜನ್ಮ ಭೂಮಿ ಸಮಸ್ಯೆ ಬಗೆಹರಿಯಲಿಲ್ಲ ಎನ್ನುವ ಭಾವನೆ ಕೋಟ್ಯಂತರ ಹಿಂದುಗಳಲ್ಲಿತ್ತು. ಇದು ನ್ಯಾಯಾಲಯದ ಅಂಗಳದಲ್ಲಿದ್ದ ಕಾರಣ ಮಧ್ಯಪ್ರವೇಶಿಸುವಂತೆ ಇರಲಿಲ್ಲ. ಕೋರ್ಟ್ ತೀರ್ಪು ಬಂದಾಗ ಇಡೀ ದೇಶವೇ ನಿಬ್ಬೆರಗಾಗಿ ನೋಡಿತು. ಒಂದು ಅಹಿತಕರ ಘಟನೆಯೂ ನಡೆಯದಂತೆ ಮೋದಿ, ಅಮಿತ್ ಷಾ ತೆಗೆದುಕೊಂಡ ಕ್ರಮಗಳು ಇದಕ್ಕೆ ಕಾರಣ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 20 ವರ್ಷಗಳ ಅವಧಿಯಲ್ಲಿ ಸೈನ್ಯಕ್ಕಾಗಿ ಒಂದು ರೈಫಲ್ ಖರೀದಿಯನ್ನು ಮಾಡಿರಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಫೆಲ್ ಖರೀದಿಸಿದ್ದಲ್ಲದೆ, ಸೈನಿಕರಿಗಾಗಿ 1.86 ಲಕ್ಷ ಬುಲೆಟ್ ಪೂ›ಪ್ ಜಾಕೆಟ್ ಕೊಡಲಾಗಿದೆ. ಅಷ್ಟೇ ಅಲ್ಲ, ಈ ಜಾಕೆಟ್​ಗಳನ್ನು ರಫ್ತು ಮಾಡಲಾಗುತ್ತಿದೆ ಎಂದರು.