ನ್ಯೂಸ್

ಹೊಣೆಗೇಡಿ ಸರ್ಕಾರದ ವಿರುದ್ಧ ಸೆ.16 ರಿಂದ ರಾಜ್ಯ ಪ್ರವಾಸ ಆರಂಭ; ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ

ಬೆಂಗಳೂರು: ಹೊಣೆಗೇಡಿ, ಜನ ವಿರೋಧಿ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟವನ್ನು ಪ್ರತಿ ಹಳ್ಳಿಗೆ ವಿಸ್ತರಿಸಲು ಸೆ.16 ರಿಂದ ರಾಜ್ಯವ್ಯಾಪಿ ಪ್ರವಾಸ ಆರಂಭಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಕೂಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಕೊಳ್ಳದಿಂದಲೇ ಪ್ರತಿಭಟನಾ ಪರ್ಯಟನೆ ನಡೆಯಲಿದೆ ಎಂದರು. ಕಾಂಗ್ರೆಸ್ ಸರ್ಕಾರ ತನ್ನ ತಪ್ಪುಗಳನ್ನು ತಿದ್ದಿಕೊಂಡು, ಬರ ಬವಣೆ ಸೇರಿ ಜನರ ಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಕಾದು ನೋಡಿದೆವು. ಆದರೆ, ಭ್ರಷ್ಟ, ಜನ ವಿರೋಧಿ ನೀತಿಗಳನ್ನು ಮುಂದುವರಿಸಿ, ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿರುವ ಕಾರಣ ಹೋರಾಟಕ್ಕೆ ಇಳಿಯಬೇಕಾಯಿತು ಎಂದು ಯಡಿಯೂರಪ್ಪ ಬಿಜೆಪಿ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.

ರಣಕಹಳೆ ಮೊಳಗು

ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದೇವೆ. ಮುಂದಿನ ಒಂದು ವರ್ಷ ಕಾಲ ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯಲಿದ್ದೇವೆ. ಅನಿಷ್ಠ ಸರ್ಕಾರದ ವಿರುದ್ಧ ಉಗ್ರ ಹೋರಾಟದ ತಿರುವು ನೀಡಲಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಐದು ಕೆಜಿ ಅಕ್ಕಿ ಕೊಡತ್ತಿರುವುದು ನರೇಂದ್ರ ಮೋದಿ ಸರ್ಕಾರ. ಅನ್ನಭಾಗ್ಯ ಯೋಜನೆ ಹೆಸರಿನಲ್ಲಿ ಮೋಸ. ನವೆಂಬರ್, ಡಿಸೆಂಬರ್ ವೇಳೆಗೆ ಜೀರೋ ಬಿಲ್, ಜೀರೋ ಕರೆಂಟ್. ಕರ್ನಾಟಕವನ್ನು ಕತ್ತಲೆಗೆ ದೂಡಲಿದೆ ಎಂದು ವಾಗ್ದಾಳಿ ಮಾಡಿದರು.

ಹುದ್ದೆಗಳ ಹರಾಜು

ರಾಜ್ಯದಲ್ಲಿ ವರ್ಗಾವಣೆ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಹುದ್ದೆಗಳನ್ನು ಹರಾಜಿಗೆ ಇಡಲಾಗಿದ್ದು, ಕುಮಾರಕೃಪಾ ಅತಿಥಿ ಗೃಹ ಈ ದಂಧೆಗೆ ಅಡ್ಡಿಯಾಗಿದೆ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವವರ ವಿರುದ್ಧ‌ ಕೇಸ್ ಹಾಕಿ ಬೆದರಿಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ತಮಿಳುನಾಡಿನ ಕಾವೇರಿ ನೀರಿನ ತಗಾದೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಗೆ ಸಕಾಲಕ್ಕೆ ಅರ್ಜಿಸಲ್ಲಿಸದೆ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರನ್ನು ವಂಚಿಸಿದೆ ಎಂದು ಕಿಡಿಕಾರಿದರು.

ನೀಚ, ನಾಚಿಕೆಗೇಡಿನ ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಪ್ರತಿಪಕ್ಷವಾಗಿ ಬಿಜೆಪಿ ಕರ್ತವ್ಯ. ಅಭಿವೃದ್ಧಿ ವಿರೋಧಿ, ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹಳ್ಳಿ, ಹಳ್ಳಿಗಳಿಗೆ ಚಳವಳಿ ಕೊಂಡೊಯ್ಯಲಿದ್ದೇವೆ. ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ, ತನಿಖೆಗಳಿಗೆ ಹೆದರಲ್ಲ ಎಂದು ಬೊಮ್ಮಾಯಿ ಗುಡುಗಿದರು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುನಿರತ್ನ, ಆರ್.ಅಶೋಕ್,‌ಕಟ್ಟಾ ಸುಬ್ರಮಣ್ಯನಾಯ್ಡು ಮಾತನಾಡಿದರು. ಮಾಜಿ ಸಚಿವರು, ಸಂಸದ, ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.