ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದ,ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದೇಶ ಅಂಗೀಕರಿಸಿದ ದಿನ (ನ.26)ದಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಹತ್ವದ ನಿರ್ಧಾರ ಪ್ರಕಟಿಸಿ, ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸ್ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ದನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜ ಬೇಕಿಲ್ಲ, ಎದೆಗುಂದ ಬೇಕಿಲ್ಲ ಎಂದು ಜಾರ್ಯಕರ್ತರಿಗೆ ವಿಜಯೇಂದ್ರ ಧೈರ್ಯ ತುಂಬಿದ್ದಾರೆ.
ಸಂವಿಧಾನ ನಮಗೆ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಕಾನೂನು ಪೋಲಿಸರಿಗೆ ಅಧಿಕಾರ ನೀಡಿಲ್ಲ, ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ತಕ್ಷಣ ಬರಲಿದೆ ಎಂದು ಹೇಳಿದ್ದಾರೆ.
ಇಷ್ಟರಲ್ಲೇ ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಕಛೇರಿಗಳಲ್ಲಿ ಕಾನೂನು ನೆರವಿಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಂ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು ಎಂಬ ಮಾಹಿತಿಯನ್ನು ಬಿ.ವೈ.ವಿಜಯೇಂದ್ರ ಹಂಚಿಕೊಂಡಿದ್ದಾರೆ.