ಮೈಸೂರು: ಮತ ಕಳ್ಳತನ ಎಂದು ಪ್ರಜಾಪ್ರಭುತ್ವವನ್ನು ಅಪಮಾನ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಬಿಜೆಪಿ ವಕ್ತಾರ ಎಂ.ಜೆ. ಮಹೇಶ್ ಆಗ್ರಹಿಸಿದರು.
ಇತ್ತೀಚಿನ ಕಾಂಗ್ರೆಸ್ ಹೇಳಿಕೆಗಳು ದೇಶ ವಿರೋಧಿಯಾಗಿವೆ. ಪಾಕಿಸ್ತಾನ ಭಯೋತ್ಪಾದನೆ ಮಾಡಿದೆ ಎನ್ನುವುದನ್ನು ಸಾಕ್ಷಿ ಕೇಳುತ್ತಿದೆ. ಟ್ರಂಪ್ ರೀತಿಯೇ ಸರ್ಕಾರವನ್ನು ದೂಷಣೆ ಮಾಡುವ ಮೂಲಕ ದೇಶದ ಸಂವಿಧಾನದ ಸಾರ್ವಭೌಮತ್ವವನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮಾಲೆಗಾವ್ ಸ್ಫೋಟ ಪ್ರಕರಣದ ಕುರಿತು ಪುಸ್ತಕವನ್ನು ಹಿಂದು ಭಯೋತ್ಪಾದಕ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಹಿಂದು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ವರದಿಗಳ ಪ್ರಕಾರ ಆರ್‌ಎಸ್‌ಎಸ್ ಸಹ ಸಂಚಾಲಕರನ್ನು ಎನ್‌ಕೌಂಟರ್ ಮಾಡಲು ಸಂಚು ರೂಪಿಸುತ್ತಿರುವುದು ಕಾಂಗ್ರೆಸ್‌ನ ಕೀಳು ಮಟ್ಟಕ್ಕೆ ಸಾಕ್ಷಿ. ಸಿಂಧೂರ ಕಾರ್ಯಾಚರಣೆಯನ್ನು ಟೀಕಿಸುವ ಮೂಲಕ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಅವರನ್ನು ಯುಎಪಿಎ ಅಡಿ ಬಂಧಿಸುವಂತೆ ಒತ್ತಾಯಿಸಿದರು.
ತಾವು ಚುನಾವಣೆಗಳಲ್ಲಿ ಗೆದ್ದರೆ ಇವಿಎಂ ಮೇಲೆ ಇಲ್ಲದ ಅನುಮಾನ ಸೋತರೆ ಮಾತ್ರ ಮೂಡುವುದು ಯಾಕೆ? ಹಲವಾರು ಹೋರಾಟಗಳು ವಿಫಲವಾಗಿದ್ದರಿಂದ ಈಗ ಚುನಾವಣಾ ಆಯೋಗದ ಮೇಲೆ ಅಪನಂಬಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಡಾ.ಸಿ.ಎನ್.ಮಂಜುನಾಥ್, ಮಹದೇವಪುರ, ಈಗ ರಾಜಾಜಿನಗರದಲ್ಲಿ ಮತಕಳ್ಳತನ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಪ್ರತಿಭಟನೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನೇಕ ಮರಗಳನ್ನು ಕಡಿಯಲಾಗಿದೆ. ಇದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಯಾವುದೇ ಮೆರವಣಿಗೆ ಮಾಡಬಾರದೆಂದು ನ್ಯಾಯಾಲಯ ಹೇಳಿದ್ದು, ಅದನ್ನು ಮೀರಿ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್‌ನಲ್ಲಿ ಮೆರವಣಿಗೆ ಮಾಡಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು.
ವಾಲ್ಮೀಕಿ ಹಗರಣದ ಹಣ ತುಕಾರಾಂ ಗೆಲುವಿಗೆ ಬಳಸಿಲ್ಲ ಎಂಬುದಾದರೆ ಧರ್ಮಸ್ಥಳದ ಮಂಜುನಾಥನ ಮುಂದೆ ಅಣೆ ಮಾಡಲಿ. 8 ಲಕ್ಷ 78 ಸಾವಿರ ಕೋಟಿ ರೂ. ಸಾಲ ಮಾಡಿ ರಾಜ್ಯದ ಜನರ ತಲೆ ಮೇಲೆ ತಲಾ 4 ಲಕ್ಷದ 70 ಸಾವಿರ ರೂ. ಸಾಲ ನೀಡಿರುವುದೇ ಸಿದ್ದರಾಮಯ್ಯ ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.
ನಗರದಲ್ಲಿ ಮಾದಕ ವಸ್ತು ತಯಾರಿ ಪ್ರಕರಣದ ಸಂಬಂಧ ನೈತಿಕ ಜವಾಬ್ದಾರಿಯನ್ನು ಶಾಸಕ ತನ್ವೀರ್ ಸೇಠ್ ತೆಗೆದುಕೊಳ್ಳಬೇಕಿದೆ. ಆ ಮೂಲಕ ನಗರ ಶಾಂತಿಯುತವಾಗಲು ನೆರವಾಗಲಿ ಎಂದು ಒತ್ತಾಯಿಸಿದರು.
ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸಂತೋಷ್‌ಕುಮಾರ್ ಇದ್ದರು.