ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಿರುವ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಎರಡು ಪಕ್ಷಗಳು ಆರೋಪ-ಪತ್ಯಾರೋಪಗಳಲ್ಲಿ ತೊಡಗಿವೆ.
ಕಾಂಗ್ರೆಸ್ ಆರೋಪಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಮೂರು ತಿಂಗಳಿಂದ ದಾರಿ ತಪ್ಪಿರುವ ರಾಜ್ಯದ ಆಡಳಿತ ವ್ಯವಸ್ಥೆ ಸರಿದೂಗಿಸುವ ಕಡೆ ನಿಗಾವಹಿಸಲಿ ಎಂದು ತಿರುಗೇಟು ನೀಡಿದೆ.
ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸುವ ವಿಚಾರದಲ್ಲೂ ಅನ್ಯೋನ್ಯತೆಯಿಲ್ಲದೆ ಮುಖ್ಯಮಂತ್ರಿ ಹಾಗೂ ಡಿಸಿಎಂ ಒಂದೇ ಸರ್ಕಾರದ ಪ್ರತಿನಿಧಿಗಳಾಗಿಯೂ, ಜತೆಗೆ ತೆರಳದೆ, ಪ್ರತಿಸ್ಪರ್ಧಿಗಳಂತೆ ಸ್ಪರ್ಧೆಗಿಳಿದು ವೈಯಕ್ತಿಕ ಮೇಲಾಟಕ್ಕೆ ಬಿದ್ದಿದ್ದನ್ನು ರಾಜ್ಯ ಕಂಡಿದೆ.
ಅಭಿನಂದಿಸುವ ವಿಚಾರದಲ್ಲೂ ತಾಳಮೇಳವಿಲ್ಲದ ಕಾಂಗ್ರೆಸ್ಗೆ ಅಹಂ ಮಾತ್ರವೇ ಕಾಣುತ್ತದೆ. ಅಹಂಕಾರ ತುಂಬಿದಾಗ ಅಂತಃಕರಣದ ಅಭಿನಂದನೆಗಳು ಕಾಣಲು ಸಾಧ್ಯವೇ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಮೂರು ತಿಂಗಳಿಂದ ದಾರಿ ತಪ್ಪಿರುವ ರಾಜ್ಯದ ಆಡಳಿತ ವ್ಯವಸ್ಥೆ ಸರಿದೂಗಿಸುವ ಕಡೆ ನಿಗಾವಹಿಸಲಿ ಎಂದು ತಿರುಗೇಟು ನೀಡಿದೆ.