ಬೆಂಗಳೂರು: ಜಾತಿ ಗಣತಿ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುವುದು ನಿಲ್ಲಿಸಬೇಕು(BJP should stop spreading misinformation about caste census). ರಾಷ್ಟ್ರಮಟ್ಟದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿಗಳ ಬಗ್ಗೆ ಎಲ್ಲ ಡೇಟಾಗಳು ಜಿಲ್ಲಾಧಿಕಾರಿಗಳ ಬಳಿ ಇವೆ. ಯಾವ ಡೇಟಾ ಬೇಕು ಹೇಳಿ ತರಿಸಿ ಕೋಡೋಣ. ಆದರೆ ಬಿಜೆಪಿ ಸುಳ್ಳು ಹೇಳುವುದು ಬೇಡ ಎಂದರು.
ಜಾತಿಗಣತಿ ಮೂಲ ವರದಿಯ ಬಗ್ಗೆ ಪ್ರತಿಪಕ್ಷ ನಾಯಕ ಅಶೋಕ್ ಅನುಮಾನ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ, ಸಮಿತಿಯ ಸದಸ್ಯರೆಲ್ಲರೂ ವರದಿಗೆ ಸಹಿ ಹಾಕಿದ್ದಾರೆ. ಆ ಸಮಿತಿ ಸದಸ್ಯರನ್ನು ನೇಮಿಸಿದ್ದು ಯಾವ ಸರ್ಕಾರ? ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿರೋದು ಅಲ್ಲವೆ? ಅವರನ್ನು ನಂಬಿಕೊಂಡೇ ಸಂಪುಟದಲ್ಲಿ ಮಂಡನೆ ಮಾಡಲಾಗಿದೆ. ಹಾಗಾದರೆ ಬಿಜೆಪಿ ಅವಧಿಯ ಸದಸ್ಯರು ಸಿದ್ಧಪಡಿಸಿರುವ ವರದಿ ಸುಳ್ಳೆ? ಎಂದು ತಿರುಗೇಟು ನೀಡಿದರು.
ಬಿಜೆಪಿ ವಿನಾಕಾರಣ ಗೊಂದಲ ಉಂಟು ಮಾಡುತ್ತಿದೆ. ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ತರಾಟೆ ತೆಗೆದುಕೊಂಡರು.
ವರದಿ ಸರಿ ಇದೆಯೋ ತಪ್ಪಿದೆಯೋ ಎಂಧು ಸಿಎಂ ಸಂಪುಟ ಸಭೆಯಲ್ಲಿ ಕೇಳಿದ್ದಾರೆ. ಅಭಿಪ್ರಾಯವನ್ನು ಸಚಿವರೆಲ್ಲರೂ ಹೇಳಿದ್ದಾರೆ. ಜೊತೆಗೆ ಸಮಯಾವಕಾಶವನ್ನೂ ಸಹ ಕೇಳಿದ್ದಾರೆ. ಆಯಾ ಸಮುದಾಯಗಳು ಕೂಡ ಅಭಿಪ್ರಾಯ ಹೇಳುತ್ತಿವೆ. ಸಮುದಾಯಗಳು ತಮ್ಮ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಬಿಜೆಪಿ ಇದರಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.