ತುಮರಿಯಲ್ಲಿ ಬಿಜೆಪಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಹರತಾಳು ಹಾಲಪ್ಪ, ಪ್ರಸನ್ನ ಕೆರೆಕೈ, ಸರಸ್ವತಿ, ಸುವರ್ಣ ಟೀಕಪ್ಪ, ಗಾಯತ್ರಿ ಮಲ್ಲಪ್ಪ ಇತರರಿದ್ದರು.  
ನ್ಯೂಸ್

ಬಿಜೆಪಿ ಯೋಜನೆಗಳೇ ಹೆಚ್ಚು ಜನಪರ

ಬ್ಯಾಕೋಡು: ಕರೊನಾ ಸಂದರ್ಭ ದೇಶದ ಜನರ ರಕ್ಷಣೆಗೆ ನಿಂತಿದ್ದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತುಮರಿ ಗೋಪಾಲ ಗೌಡ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗಿಂತ ಬಿಜೆಪಿ ಯೋಜನೆಗಳು ಹೆಚ್ಚು ಜನಪರವಾಗಿವೆ. ದೇಶದ ಆರ್ಥಿಕ ಭದ್ರತೆಗಾಗಿ ಜನರು ಯೋಚಿಸಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನಾಯಕಿ ರಾಜನಂದಿನಿ ಕಾಗೋಡು ಮಾತನಾಡಿ, ಶರಾವತಿ ಹಿನ್ನೀರಿಗೆ ಬಹು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಿಸಿರುವುದು ಬಿಜೆಪಿ ಕೊಡುಗೆ. ಇದಕ್ಕೆ ಅಂದಿನ ಕೇಂದ್ರ ಸಚಿವ ನಿತಿನ್ ಗಡ್ಕರಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಬಿ.ಎಸ್.ಯಡಿಯೂರಪ್ಪ ಅವರ ಶ್ರಮ ಕಾರಣ. ಈ ಭಾಗದ ಜನರು ಇವರ ಕೊಡುಗೆಯನ್ನು ಪರಿಗಣಿಸಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಪ್ರಸನ್ನ ಕೆರೆಕೈ ಮಾತನಾಡಿ, ಸಿಗಂದೂರು ಸೇತುವೆ ಸೇರಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಸಿಗಂದೂರು ಸೇತುವೆ ಮೂಲಕ ಈ ಭಾಗದಲ್ಲಿ ಹೊಸ ಉದ್ಯೋಗ, ಉದ್ಯಮಗಳ ಸೃಷ್ಟಿ ಸಾಧ್ಯವಾಗಿದೆ. ಈ ಭಾಗದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಕುದರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಪ್ರಮುಖರಾದ ಸುವರ್ಣ ಟೀಕಪ್ಪ, ನಾಗರಾಜ ಬೊಬ್ಬಿಗೆ, ಗಾಯತ್ರಿ ಮಲ್ಲಪ್ಪ ಇತರರಿದ್ದರು.