ನ್ಯೂಸ್

ಉಚಿತ ಯೋಜನೆಗಳಿಂದ ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿಲ್ಲ; ಬಿ.ವೈ. ವಿಜಯೇಂದ್ರ

ರಾಣೆಬೆನ್ನೂರ: ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್​ ಸರ್ಕಾರದಿಂದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ನಡೆಯುತ್ತಿದೆ. ಉಚಿತ ಯೋಜನೆಗಳಿಂದ ಸರ್ಕಾರಕ್ಕೆ ಅಧಿಕಾರಿಗಳಿಗೆ ಸಂಬಳ ನೀಡಲು ಆಗುತ್ತಿಲ್ಲ. ಗುತ್ತಿಗೆದಾರರು ಬಿಲ್​ ಪಾಸ್​ ಆಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಇತ್ತೀಚಿಗೆ ನಿಧನ ಹೊಂದಿದ ಜಿಲ್ಲಾ ಕಾರ್ಯದಶಿರ್ ದೀಪಕ ಹರಪನಹಳ್ಳಿ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.

ಆಕಳುಗಳ ಕೆಚ್ಚಲಕ್ಕೆ ಬ್ಲೆಡ್​ ಹಾಕಿರುವ ಟನೆ ನಿಜಕ್ಕೂ ಅಮಾನವೀಯವಾಗಿದೆ. ರಾಜ್ಯದ ಮುಖ್ಯಮಂತ್ರಿಗೆ ಈ ಕುರಿತು ಯಾವುದೆ ನೋವಾಗಿಲ್ಲ. ಕಟಕರಿಗೆ ಸಹ ಅಂತಹ ಮನಸ್ಥಿತಿ ಬರಲು ಸಾದ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಆಡಳಿತದಿಂದ ಗುತ್ತಿಗೆದಾರರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದಾರೆ. ಸಂಬಳ ಕೊಡಲು ಸರ್ಕಾರದಲ್ಲಿ ಹಣ ಇಲ್ಲ. ಮುಖ್ಯಮಂತ್ರಿ ಪದವಿಗಾಗಿ ಕಾಂಗ್ರೆಸ್​ ಪಕ್ಷದಲ್ಲಿ ಕಿತ್ತಾಟ ಶುರುವಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ಈಗಾಗಲೇ ಅವರನ್ನು ಇಳಿಸಲು ಕಾಂಗ್ರೆಸ್​ ಪಕ್ಷದಿಂದಲೆ ಸಂಚು ನಡೆಯುತ್ತಿದೆ ಎಂದರು.

ದೀಪಕ ಹರಪನಹಳ್ಳಿ ಪಕ್ಷದ ಕೊಂಡಿಯಾಗಿ ಸಕ್ರೀಯವಾಗಿ ತೊಡಗಿಕೊಂಡವರು. ಅವರ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದೆ. ಇಂತಹ ಅಸಂಖ್ಯಾತ ಕಾರ್ಯಕರ್ತರ ಶಕ್ತಿಯಿಂದಲೆ ಬಿಜೆಪಿ ಪಕ್ಷ ಇಂದು ಜಗತ್ತಿನ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾರ್ಯಕರ್ತರನ್ನು ಹೊರತುಪಡಿಸಿ ಪಕ್ಷವಿಲ್ಲ. ಮೃತ ಕಾರ್ಯಕರ್ತರ ನೆನಪನ್ನು ಪಕ್ಷ ಸದಾ ಸ್ಮರಿಸುತ್ತದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರಂತೆ ಪಕ್ಷ ಸಂಘಟನೆ ಮಾಡುತ್ತೇನೆ. ಇದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ವಿಧಾನ ಪರಿಷತ್​ ಸದಸ್ಯ ಎನ್​. ರವಿಕುಮಾರ, ರಾಜ್ಯ ಕಾರ್ಯದಶಿರ್ ಶರಣು ತಳ್ಳಿಕೇರಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ನಗರ ಘಟಕ ಅಧ್ಯಕ್ಷ ರಮೇಶ ಗುತ್ತಲ, ತಾಲೂಕು ಘಟಕ ಅಧ್ಯಕ್ಷ ಪರಮೇಶ ಗೂಳಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಕೆ. ಶಿವಲಿಂಗಪ್ಪ, ಎಸ್​.ಎಸ್​. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಭಾರತಿ ಜಂಬಗಿ, ಜಟ್ಟೆಪ್ಪ ಕರೇಗೌಡ್ರ, ಕುಬೇರಪ್ಪ ಕೊಂಡಜ್ಜಿ, ನಾಗರಾಜ ಬಣಕಾರ, ಪ್ರಕಾಶ ಪೂಜಾರ, ಬಸವರಾಜ ಚಳಗೇರಿ, ಭೀಮಣ್ಣ ಎಡಚಿ ಮತ್ತಿತರರು ಉಪಸ್ಥಿತರಿದ್ದರು.