ನ್ಯೂಸ್

Bihar Election ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ, ಸ್ಪೀಕರ್ ನಂದ ಕಿಶೋರ್​ಗೆ ಕೊಕ್​

Bihar Election: ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಇತ್ತೀಚೆಗೆ ಪ್ರಕಟವಾಗಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಸೀಟು ಹಂಚಿಕೆ ಒಪ್ಪಂದದಗಳ ಕುರಿತಾದ ಚರ್ಚೆಯ ನಡುವೆಯೇ, ಬಿಜೆಪಿ ಮಂಗಳವಾರ (ಅ 14) 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಹೆಸರು ಘೋಷಣೆಯಾಗಿದ್ದು, ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್​​ರನ್ನು ಪಾಟ್ನಾ ಸಾಹಿಬ್ ಸ್ಥಾನದಿಂದ ಕೈಬಿಟ್ಟು ರತ್ನೇಶ್ ಕುಶ್ವಾಹ ಅವರನ್ನು ಅಭ್ಯರ್ಥಿಯಾಗಿಸಿದೆ. ಡಿಸಿಎಂ ಚೌಧರಿ ತಾರಾಪುರದಿಂದ, ಸಿನ್ಹಾ ಲಖಿಸರಾಯ್‌ನಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿ ತನ್ನ ಪಟ್ಟಿಯನ್ನು ಪ್ರಕಟಿಸುವ ಕೆಲವು ಗಂಟೆಗಳ ಮುಂಚೆ ಡಿಸಿಎಂ ಚೌಧರಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಎನ್‌ಡಿಎ ಪಕ್ಷಗಳ ನಡುವಿನ ಸೀಟು ಹಂಚಿಕೆ ಸೌಹಾರ್ದಯುತ ಮೂಲಕ ಪರಿಹರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಡುವಿನ ಕೊನೆಯ ಕ್ಷಣದ ಸ್ಥಾನ ಹಂಚಿಕೆ ಬಿಕ್ಕಟ್ಟು ಮುಂದುವರೆದ ಕಾರಣದಿಂದಲೇ, ನಿಗದಿಪಡಿಸಲಾದ ಪತ್ರಿಕಾಗೋಷ್ಠಿ ರದ್ದಾಯಿತು ಎಂದು ಮೂಲಗಳು ತಿಳಿಸಿವೆ.

ಭಾನುವಾರ ಎನ್​ಡಿಎ ಮೈತ್ರಿಕೂಟ ತನ್ನ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿತ್ತು, ಅದರಡಿಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಜನ ಸುರಾಜ್ ಎರಡನೇ ಪಟ್ಟಿ...

ಜನ ಸುರಾಜ್ ಪಕ್ಷ ಸೋಮವಾರ ( ಅ 13) 66 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಶಾಂತ್ ಕಿಶೋರ್ ಆರ್​ಜೆಡಿಯ ಯಾದವ್ ಕುಟುಂಬದ ಭದ್ರಕೋಟೆ ರಾಘೋಪುರ್‌ನಿಂದ ಸ್ಪರ್ಧಿಸಲಿದ್ದಾರೋ, ಇಲ್ಲವೋ ಎಂಬ ಕುತೂಹಲ ಹಾಗೇ ಮುಂದುವರೆದಿದೆ.

ಮಹಾಘಟಬಂಧನ್...

ರಾಷ್ಟ್ರೀಯ ಜನತಾ ದಳ ಜೊತೆಗಿನ ಸೀಟು ಹಂಚಿಕೆ ಮಾತುಕತೆ ಬಹುತೇಕ ಅಂತಿಮಗೊಂಡಿದ್ದು, ಎರಡು, ಮೂರು ಕ್ಷೇತ್ರಗಳು ಕುರಿತಾಗಿ ಚರ್ಚೆ ಮುಂದುವರೆದಿದೆ, ಇಂದು ಟಿಕೆಟ್​ ಹಂಚಿಕೆ ಸುದ್ದಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸೀಟು ಹಂಚಿಕೆ ಕುರಿತಾಗಿ ಯಾವುದೇ ಅಸಮಧಾನವಿಲ್ಲ, ಎರಡೂ ಪಕ್ಷಗಳು ಹಕ್ಕು ಮಂಡಿಸಿರುವ ಕೆಲವು ಸ್ಥಾನಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಸ್ಥಾನಗಳ ಇತ್ಯರ್ಥವಾಗಿದೆ ಎಂದು ಕಾಂಗ್ರೆಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಹಂತದ ಚುನಾವಣೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನವಾಗಿದೆ.(ಏಜೆನ್ಸೀಸ್​​)