ಜೈಪುರ: ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸಿಎಂ ಅಶೋಕ್ ಗೆಹ್ಲೋಟ್ ಮಾತಿನಲ್ಲಿ ಹುರುಳಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಬಣ ಜಗಳ ತಾರಕಕ್ಕೇರಿದೆ. ಅದನ್ನು ನಿಯಂತ್ರಿಸುವುದಕ್ಕಾಗಿ ಸಿಎಂ ಗೆಹ್ಲೋಟ್ ಶಾಸಕರು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ಪೊಲೀಸ್ ಇಲಾಖೆಯ ಸ್ಪೆಷಲ್ ಆಪರೇಷನ್ಸ್ ಗ್ರೂಪ್ ಅನ್ನು ಛೂ ಬಿಡುತ್ತಿದ್ದಾರೆ. ಕೇಸ್ಗಳನ್ನು ದಾಖಲಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲೂ ಸಿಎಂ ಗೆಹ್ಲೋಟ್ ಲಾಜಿಕಲ್ ಆಗಿ ಮಾತನಾಡಿಲ್ಲ, ಮಾತನಾಡುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಬಣಜಗಳ ನಡೆಯುತ್ತಿದ್ದರೂ. ಸಿಎಂ ಗೆಹ್ಲೋಟ್ ಮಾತ್ರ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ ಪಕ್ಷದ ಹಿರಿಯ ನಾಯಕರಾದ ಅವರ ನೋವು ಸಮರ್ಥನೀಯವೇ ಆಗಿದೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಸತೀಶ್ ಪೂರ್ನಿಯಾ ಹೇಳಿದ್ದಾರೆ.
ನನ್ನ ಸರ್ಕಾರವನ್ನು ಪತನಗೊಳಿಸುವ ಕೇಂದ್ರದ ಪ್ರಯತ್ನದಲ್ಲಿ ಪೂರ್ನಿಯಾ, ಗುಲಾಬ್ ಚಾಂದ್ ಕಠಾರಿಯಾ ಮತ್ತು ರಾಜೇಂದ್ರ ರಾಥೋಡ್ ಅವರು ತೊಡಗಿದ್ದಾರೆ ಎಂದು ಸಿಎಂ ಗೆಹ್ಲೋಟ್ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪೂರ್ನಿಯಾ ಈ ಹೇಳಿಕೆ ನೀಡಿದ್ದಾರೆ.
ತನ್ನ ಶಾಸಕರ ಮೇಲೆ ನಂಬಿಕೆ ಇಲ್ಲದ ಕಾರಣ ಸಿಎಂ ಗೆಹ್ಲೋಟ್ ಅವರನ್ನು ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಹುದಿನಗಳ ಕಾಲ ರೆಸಾರ್ಟ್ನಲ್ಲಿ ಇರಿಸಿದ್ದರು. ಗೆಹ್ಲೋಟ್ ಅವರು ಬಕ್ರಾ-ಮಂಡಿಯ ಪ್ರಸ್ತಾಪ ಮಾಡಿದ್ದರು. ರಾಜ್ಯ ರಾಜಕಾರಣವನ್ನು ಬಕ್ರಾ ಮಂಡಿಗೆ ಹೋಲಿಸುವುದಕ್ಕೆ ಹೇಗೆ ಸಾಧ್ಯವಾಯಿತು? ಇದಕ್ಕೆ ಅವರು ಪ್ರತಿಕ್ರಿಯಿಸಬೇಕು ಎಂದು ಕಠಾರಿಯಾ ಆಗ್ರಹಿಸಿದ್ದಾರೆ. (ಏಜೆನ್ಸೀಸ್)