ನ್ಯೂಸ್

ಸರ್ಕಾರದ ನೀತಿಗಳ ವಿರುದ್ಧ ಬಿಜೆಪಿ ರೈತ ಶಕ್ತಿ ಪ್ರದರ್ಶನ

ಬೆಂಗಳೂರು: ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ ಎಂದು ಬಿಂಬಿಸಿ, ರೈತರಿಗೆ ಮಾರಕ ನೀತಿಗಳನ್ನು ಜಾರಿಗೊಳಿಸಲು ಬಿಡೆವು. ರೈತ ಪರವಾದ ಕಾರ್ಯಕ್ರಮಗಳನ್ನು ಮರಳಿ ಸೇರಿಸದಿದ್ದರೆ ಉಗ್ರ ನಡೆಸಲಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಿ, ಬಿಜೆಪಿ ರೈತ ಮೋರ್ಚಾ ಸೋಮವಾರ ರೈತ ಶಕ್ತಿ ಪ್ರದರ್ಶಿಸಿತು.

ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ವಿಲವಾಗಿದ್ದಷ್ಟೇ ಅಲ್ಲ, ರೈತ ವಿರೋಧಿ ನೀತಿಗಳನ್ನು ಅನುಸರಿಸಿದೆ ಎಂದು ಬಿಜೆಪಿ ರೈತ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿ 15 ಜಿಲ್ಲೆಗಳಲ್ಲಿ ಹೋರಾಟ ನಡೆಸಿತು. ದೂರಗಾಮಿ ಪ್ರಯೋಜನ ನೀಡುವ ಕೃಷಿ, ನೀರಾವರಿ, ಪಶು ಸಂಗೋಪನೆ ಮತ್ತಿತರ ವಲಯಕ್ಕೆ ಬಜೆಟ್‌ನಲ್ಲಿ ಅನುದಾನ ಕಡಿತ ಮಾಡಿರುವುದಕ್ಕೆ ಕಳವಳ ವ್ಯಕ್ತಪಡಿಸಿತು.

ಮೈಸೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ಬಳ್ಳಾರಿ, ಕೊಪ್ಪಳ, ಮಂಡ್ಯ, ಹಾವೇರಿ, ಬೀದರ್, ಯಾದಗಿರಿ, ರಾಯಚೂರು, ವಿಜಯನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

ಮುಂಗಾರು ಮಳೆ ಏರುಪೇರಿನಿಂದಾಗಿ ಸಮಸ್ಯೆಗೆ ಸಿಲುಕಿರುವ ರೈತರಿಗೆ ನೆರವಾಗಿಲ್ಲ. ಜತೆಗೆ ರೈತ ಪರವಾದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ಕೃಷಿ ಮತ್ತು ನೀರಾವರಿ ಮೀಸಲಿಟ್ಟ ಅನುದಾನ ಕಡಿತಗೊಳಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ನಷ್ಟ ಪರಿಹಾರ, ಕಿಸಾನ್ ಸಮ್ಮಾನ್ ನಿಧಿ, ಸಿಎಂ ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆಗಳ ಪುನರಾರಂಭಿಸಬೇಕು. ರೈತ ವಿರೋಧಿ ನೀತಿಗಳನ್ನು ಕೈ ಬಿಡಬೇಕೆಂದು ರೈತ ಮೋರ್ಚಾ ಆಗ್ರಹಿಸಿದೆ.

15 ಜಿಲ್ಲೆಗಳಲ್ಲಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಈ ಚಳವಳಿಯಲ್ಲಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಹಿರಿಯ ಮುಖಂಡರು, ರೈತ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.