ನ್ಯೂಸ್

ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಮೋರ್ಚಾ ಚಾರ್ಜ್‌ಶೀಟ್

ಮೃತ್ಯುಂಜಯ ಕಪಗಲ್

ಬೆಂಗಳೂರು: ರಾಜ್ಯ ಸರ್ಕಾರ ಹೇಗೆ ರೈತ ವಿರೋಧಿಯಾಗಿದೆ ಎಂದು ವಿವರಿಸುವ ಜತೆಗೆ ‘ಚಾರ್ಜ್‌ಶೀಟ್’ (ದೋಷಾರೋಪ) ನ್ನು ಬಿಜೆಪಿ ರಾಜ್ಯ ರೈತ ಮೋರ್ಚಾ ಸಿದ್ಧಮಾಡಿದ್ದು, ಇದನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಸೋಮವಾರ ಹೋರಾಟ ನಡೆಸಲು ತೀರ್ಮಾನಿಸಿದೆ.

ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರೈತರು, ಜನಪರ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಸರ್ಕಾರ ಕೊಕ್ಕೆ ಹಾಕಿದೆ. ಕೃಷಿ, ನೀರಾವರಿ ಸೇರಿ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತ ಮಾಡಿದೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಎರಡು ತಿಂಗಳಲ್ಲೇ ರೈತರ ಪರವಾದ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ, ಅನ್ನದಾತರಿಗೆ ಮಾರಕವಾದ ನೀತಿಗಳನ್ನು ಜಾರಿಗೊಳಿಸಿದೆ. ಬಿಜೆಪಿ ಆಡಳಿತಾವಧಿಯ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲ, ರೈತ ವಿರೋಧಿ ನೀತಿ ಜಾರಿಗೊಳಿಸಿರುವುದು ಅತ್ಯಂತ ಖಂಡನೀಯವಾಗಿದೆ.

ಈ ಹಿನ್ನೆಲೆಯಲ್ಲಿ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಿದ್ದು, ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೂ ರೈತ ಸಿದ್ಧವಿದೆ ಎಂದು ಈರಣ್ಣ ಕಡಾಡಿ ಎಚ್ಚರಿಸಿದ್ದಾರೆ.

ಚಾರ್ಜ್‌ಶೀಟ್ ಮುಖ್ಯಾಂಶಗಳು

ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದ ಪಾಲಿನ ನಾಲ್ಕು ಸಾವಿರ ರೂ., ಸಿಎಂ ರೈತ ವಿದ್ಯಾನಿಧಿ ಯೋಜನೆ ಸ್ಥಗಿತ. ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಯೋಜನೆ ವಾಪಸ್, ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ.

ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿಗೆ ಒತ್ತು, ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆಗೆ ಕೊಕ್ಕೆ, ಮೀನುಗಾರರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರದ್ದು, ಮುಂಗಾರು ವೈಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಕಾರಣ ಎರಡು ತಿಂಗಳಲ್ಲಿ 42 ರೈತರ ಆತ್ಮಹತ್ಯೆ.