ನ್ಯೂಸ್

ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್​ ಎತ್ತಿಹಿಡಿದಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಟಕ ಪ್ರತಿಭಟಿಸಿತು.

ನಗರದ ಟೌನ್​ಹಾಲ್​ ವೃತ್ತದಲ್ಲಿ ಮಂಗಳವಾರ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ನೇತೃತ್ವದಲ್ಲಿ ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು ಹೈಕೋರ್ಟ್​ ತೀರ್ಪು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಘೋಷಣೆಗಳನ್ನು ಕೂಗಿದರು.

ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮಸರಿ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದ್ದು ಜಪ್ರತಿನಿಧಿಗಳ ನ್ಯಾಯಾಲಯದಲ್ಲಿನ ಸಿಎಂ ವಿರುದ್ಧ ತನಿಖೆಗೆ ಇದ್ದ ತಡೆಯಾಜ್ಞೆ ತೆರವಾಗಲಿದೆ. ಇನ್ಮುಂದೆ ಸಿದ್ದರಾಮಯ್ಯ ವಿಚಾರಣೆಯನ್ನು ಎದುರಿಸಬೇಕಿದ್ದು ಅವರು ಅಧಿಕಾರದಲ್ಲಿ ಮುಂದುವರೆಯಬಾರದು. ಇದು ಸಹಜ ನ್ಯಾಯಪ್ರಕ್ರಿಯೆಗೆ ವಿರುದ್ಧ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರು, ನಿಷ್ಕಳಂಕರು ಎನ್ನುವ ಬಿಂಬ ಮುರಿದುಬಿದ್ದಿದೆ. 2013 ರಿಂದ ಮತ್ತು ಅದಕ್ಕಿಂತ ಮುಂಚಿನಿಂದಲು ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು. ಅವರ ಅಧಿಕಾರದ ದುರ್ಬಳಕೆಯಾಗಿದೆ. ಮತ್ತು ಅವರ ಕುಟುಂಬ ಇಲ್ಲಿ ಫಲಾನುಭವಿ ಎಂದು ನ್ಯಾಯಾಲಯ ಹೇಳಿದೆ. ಇದು ಸಿದ್ದರಾಮ್ಯನವರು ತಾಮ ಹೇಳಿಕೊಳ್ಳುವಂತೆ ಈವರೆಗೆ ಭಾರಿ ಪ್ರಾಮಾಣಿಕ ರಾಜಕೀಯ ಜೀವನ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಅಧಿಕಾರದ ದುರ್ಬಳಕೆ ಮಾತ್ರವಲ್ಲ, ಸ್ವಜನಪಕ್ಷಪಾತವು ಆಗಿದೆ. ಅವರು ತಮ್ಮ ಕುಟುಂಬಕ್ಕೆ ಕಾನೂನು ಬಾಹಿರವಾಗಿ ಅನುಕೂಲಮಾಡಿಕೊಂಡಿದ್ದಾರೆ ಎಂಬುದನ್ನು ನ್ಯಾಯಾಲಯವೇ ಹೇಳಿದೆ ಎಂದರು.

ನ್ಯಾಯಾಂಗ ವ್ಯವಸ್ಥೆಯನ್ನು ನಾವು ಗೌರವಿಸಬೇಕು. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದನ್ನು ಈ ತೀರ್ಪು ಸಾಬೀತು ಪಡಿಸಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಒಂದು ಹ್ಯಾಟ್ಸ್​ ಆ್​ ಹೇಳಬೇಕಿದೆ. ಯಾರ ವಿರುದ್ಧವೇ ಆಗಲಿ ತನಿಖೆ ನಡೆಯುವಾಗ ಅಧಿಕಾರದಲ್ಲಿ ಇರಬಾರದು. ಜಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪಿತಸ್ಥರಲ್ಲ ಎಂಬ ತೀರ್ಪು ಬಂದರೆ ಮತ್ತೆ ಸಿದ್ದರಾಮಯ್ಯನವರೇ ಸಿಎಂ ಆಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ನೈತಿಕ ಹೊಣೆಹೊತ್ತುಕೊಂಡು ತಕ್ಷಣ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.

ಯಾವಾಗಲೂ ನೈತಿಕತೆಯ ಮತ್ತು ಸಮಾಜವಾದದ ಪಾಠವನ್ನ ಇಡೀ ರಾಜ್ಯಕ್ಕೆ ಬೋದಿಸುತ್ತಿದ್ದ ಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಮೂಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್​ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿರುವುದರಿಂದ ನೈತಿಕ ಹೊಣೆ ಹೊತ್ತು ಪಾರದರ್ಶಕ ತನಿಖೆಗೆ ಅನುವು ಮಾಡಿಕೊಡಬೇಕಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಎಸ್​.ಪಿ.ಚಿದಾನಂದ್​, ಎಸ್​.ಡಿ.ದಿಲೀಪ್​ ಕುಮಾರ್​ , ಡಾ.ಎಸ್​.ಪರಮೇಶ್​, ಬಿ.ಎಸ್​.ನಾಗೇಶ್​, ಬೆಳ್ಳಿಲೋಕೇಶ್​, ರವೀಶಯ್ಯ, ವಿಷ್ಣುವರ್ಧನ್​, ಎಚ್​.ಮಲ್ಲಿಕಾರ್ಜುನಯ್ಯ, ವೇದಮೂರ್ತಿ, ಆಟೋ ಯಡಿಯೂರಪ್ಪ, ಪ್ರಭಾಕರ್​ ಬೆಳಗುಂಬ, ಶಂಕರ್​, ಆಂಜಿನಪ್ಪ, ಶಬ್ಬಿರ್​, ಬನಶಂಕರಿಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಇದು ಸತ್ಯಕ್ಕೆ ಸಿಕ್ಕ ಜಯ. ಭ್ರಷ್ಟಾಚಾರಕ್ಕೆ ಆದ ಅಪಜಯ. ಸತ್ಯ ಹರಿಶ್ಚಂದ್ರನ ತುಣುಕು ಎನ್ನುವ ಹಾಗೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ಪಕ್ಷದ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯರ ಮುಖವಾಡ ಕಳಚಿಬಿದ್ದಿದ್ದು ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಇಂದಿನಿಂದಲೇ ಜನಾಂದೋಲನ ಶುರು ಮಾಡುತ್ತೇವೆ. ಬಿ.ಸುರೇಶಗೌಡ ಬಿಜೆಪಿ ಶಾಸಕ