ನ್ಯೂಸ್

ಬೆಂಗಳೂರು ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮೃತ್ಯುಂಜಯ ಕಪಗಲ್

ಬೆಂಗಳೂರು: ಮಳೆಯಿಂದ ಹಳ್ಳ-ಗುಂಡಿಬಿದ್ದ ರಸ್ತೆ ರಿಪೇರಿ ಮಾಡಿಸಲು ಕಾಂಗ್ರೆಸ್ ಸರ್ಕಾರ ವಿಲವಾಗಿ, ಬರಿಗೈಲಿ ‘ಬ್ರ್ಯಾಂಡ್ ಬೆಂಗಳೂರು’ ಎಂದು ಕೊಚ್ಚಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ಮಾಡಿದೆ.

ರಾಜಧಾನಿ ಅಭಿವೃದ್ಧಿ ಕಡೆಗಣನೆ ಖಂಡಿಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ನಾಗರಿಕರ ಬವಣೆ, ಅಭಿವೃದ್ಧಿಗೆ ನಿರ್ಲಕ್ಷಿಸಿದರೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳಲಾಗದು ಎಂಬ ಎಚ್ಚರಿಕೆ ಸಂದೇಶ ರವಾನಿಸಿತು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಚಳವಳಿಯಲ್ಲಿ ಮಾಜಿ ಸಿಎಂ, ಮಾಜಿ ಸಚಿವರು, ಶಾಸಕರು, ಹಿರಿಯ ನಾಯಕರು, ಮುಖಂಡರು, ಪದಾಧಿಕಾರಿಗಳು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ೋಷಣೆ ಮೊಳಗಿಸಿದರು. ಅನುದಾನವಿಲ್ಲದ ಬ್ರ್ಯಾಂಡ್ ಬೆಂಗಳೂರು ಬೇಡ, ಬೆಂಗಳೂರನ್ನು ಡ್ರಗ್ಸ್ ಗಾಂಜಾ ನಶೆಯಲ್ಲಿ ಜನರು ಬೀಳುವಂತೆ ಮಾಡಿದೆ. ಲೋಕಾರ್ಪಣೆ ಎಂದರೆ ಮಚ್ಚು, ಲಾಂಗು, ತಲ್ವಾರ್‌ಗಳ ಪ್ರದರ್ಶನ, ಶಂಕುಸ್ಥಾಪನೆ ಎಂದರೆ ಹಲ್ಲೆ, ಕೊಲೆಗೆ, ಸುಲಿಗೆ, ಅತ್ಯಾಚಾರಗಳು ಎಂದು ಕಾಂಗ್ರೆಸ್ ಭಾವಿಸಿದಂತಿದೆ ಎಂಬ ಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಾವಿರ ಕೋಟಿ ರೂ.ಗೆ ಆಗ್ರಹ
ಆರ್.ಅಶೋಕ್ ಮಾತನಾಡಿ ಮುಂಗಾರು ಮಳೆ ಪ್ರವೇಶಿಸುವ ಮುನ್ನವೇ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳು, ಅಗತ್ಯ ಕ್ರಮಗಳನ್ನು ಕೈಗೊಂಡು, ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಗರ ವೀಕ್ಷಣೆ ಮಾಡಿದ್ದಾರೆಯೇ ಹೊರತು ಅಭಿವೃದ್ಧಿಗೆ ಹಣ ನೀಡಿಲ್ಲ. ಪೌರ ಕಾರ್ಮಿಕರು, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲದ ಪರಿಣಾಮ ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚಲಾಗಿಲ್ಲ, ಕಸದ ರಾಶಿ ಎಲ್ಲೆಡೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಜನರು ಈಗ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುತ್ತಿದ್ದಾರೆ. ಅತ್ಯಧಿಕ ತೆರಿಗೆ ಪಾವತಿಸುತ್ತಿದ್ದು, ಸರ್ಕಾರ ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ ಬ್ಯಾಡ್ ಬೆಂಗಳೂರು ಮಾಡಿದೆ ಎಂದು ಜನರು ರೋಸಿಹೋಗಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲೆಂದು ಈ ಹೋರಾಟ ನಡೆಸಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.
ಭ್ರಷ್ಟ, ಗೂಂಡಾ ರಾಜಕಾರಣ

ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ. ಗೂಂಡಾಗಿರಿ, ಭ್ರಷ್ಟ ರಾಜಕಾರಣ ಮಾಡುತ್ತಿದೆ. ಬೆಂಗಳೂರು ಕಡೆಗಣಿಸಿದರೆ ಉಗ್ರ ಹೋರಾಟಕ್ಕೂ ಸಿದ್ಧವೆಂದು ಎಚ್ಚರಿಸಿದರು.

ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ, ಬೈರತಿ ಬಸವರಾಜ, ಮುನಿರತ್ನ ಮಾತನಾಡಿ ಸರ್ಕಾರದ ವೈಲ್ಯಗಳನ್ನು ವಿವರಿಸಿ, ಮುಂದಿನ ಹಂತದಲ್ಲಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದರು.