ನ್ಯೂಸ್

ಸರ್ಕಾರಕ್ಕೆ ಚಾಟಿ ಬೀಸಲು ಬಿಜೆಪಿ ತಯಾರಿ: ಆರ್.ಅಶೋಕ್

ಬೆಂಗಳೂರು: ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಬರದಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಬೆಳೆ ಪರಿಹಾರ ನೀಡುತ್ತಿಲ್ಲ. ಕುಡಿಯುವ ನೀರು ಸೇರಿ ತುರ್ತು ಅಗತ್ಯದ ಕೆಲಸಗಳು ಇನ್ನೂ ಶುರುವಾಗಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಕಲಬುರಗಿ ಜಿಲ್ಲೆ ಪ್ರವಾಸ ಕೈಗೊಳ್ಳುವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಸೋಮವಾರ ಭೇಟಿ ನೀಡಿ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬರಗಾಲದ ಪರಿಸ್ಥಿತಿ, ಪರಿಹಾರ ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ತಿಳಿದುಕೊಳ್ಳುವುದು ಪ್ರವಾಸ ಉದ್ದೇಶವಾಗಿದೆ. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಜತೆಗೆ ಚರ್ಚಿಸಿರುವೆ.

ಪಕ್ಷದ ಎಲ್ಲ ಶಾಸಕರಿಗೆ ಕ್ಷೇತ್ರದ ಬರ ಪರಿಸ್ಥಿತಿ, ಸರ್ಕಾರ ಕೈಗೊಂಡ ಕ್ರಮಗಳ ಸಮಗ್ರ ವರದಿಯನ್ನು ತೆಗೆದುಕೊಂಡು ಬರುವಂತೆ ಸಲಹೆ ನೀಡಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರ್.ಅಶೋಕ್ ಹೇಳಿದರು.

ಜವಾಬ್ದಾರಿ ಮರೆತ ಸರ್ಕಾರ

ಕೃಷಿ ಪಂಪ್‌ಸೆಟ್‌ಗಳಿಗೆ ಈ ಮೊದಲು ಏಳು ತಾಸು ಮೂರು ೇಸ್ ವಿದ್ಯುತ್ ಪೂರೈಕೆಯಾಗುತ್ತಿತ್ತು. ಈಗ ಎರಡು ತಾಸು ಪೂರೈಕೆಯಾಗುತ್ತಿಲ್ಲವೆಂದು ರೈತರು ಹೇಳುತ್ತಿದ್ದರೆ, ಐದು ತಾಸಿನಿಂದ ಮತ್ತೆ ಏಳು ತಾಸಿಗೆ ಏರಿಸಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ರೋಸಿಹೋಗಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರತಿಪಕ್ಷ ಧ್ವನಿ ಎತ್ತಲಿದೆ ಎಂಬ ಕಾರಣಕ್ಕೆ ನಾಲ್ಕು ತಾಸು ಪೂರೈಸಲಾರಂಭಿಸಿದೆ. ಅಧಿವೇಶನದ ಬಳಿಕ ಮತ್ತೆ ಎರಡು ತಾಸಿಗೆ ಇಳಿಸಿದರೂ ಅಚ್ಚರಿಯಿಲ್ಲವೆಂದು ಆರ್.ಅಶೋಕ್ ತಿವಿದರು.

ರಾಜ್ಯದ ಹಿತ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮರೆತು, ದಬ್ಬಾಳಿಕೆ ಹಾಗೂ ಗೂಂಡಾಗಿರಿಗೆ ಇಳಿದಿದೆ. ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ, ಸುಳ್ಳು ಮೊಕದ್ದಮೆ, ಹಿಂದು ಹಾಗೂ ಬಜರಂಗದಳ ಕಾರ್ಯಕರ್ತರ ಗಡಿಪಾರು ಮಾಡುತ್ತಿದ್ದು, ಪ್ರತಿಪಕ್ಷವಾಗಿ ಬಿಜೆಪಿ ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಸಿದರು.

ಆರು ತಿಂಗಳಲ್ಲಿ ಅಗಾಧ ಸಾಧನೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಾರುತ್ತಿದ್ದಾರೆ. ಆದರೆ ನಾಲ್ಕು ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ.

ಒಂದೆಡೆ ಉಚಿತ ವಿದ್ಯುತ್ ಎನ್ನುತ್ತಾ ಮತ್ತೊಂದೆಡೆ ವಿದ್ಯುತ್ ದರ ಹೆಚ್ಚಿಸುತ್ತಿದೆ. ಎರಡು ತಿಂಗಳು ಶೂನ್ಯ ಬಿಲ್ ಬಂದರೆ ಮತ್ತೆರಡು ತಿಂಗಳಿಲ್ಲ. ಗೃಹಲಕ್ಷ್ಮಿ ಯೋಜನೆಯ ಎಲ್ಲ ಲಾನುಭವಿಗಳಿಗೆ ಇನ್ನೂ ಭತ್ಯೆ ನೀಡಲಾಗಿಲ್ಲ. ಶಕ್ತಿ ಯೋಜನೆ ಬಗ್ಗೆಯೂ ಆರೋಪಗಳು ಕೇಳಿಬರುತ್ತಿದ್ದು, ಅಭಿವೃದ್ಧಿ ಕೆಲಸಗಳಂತೂ ನೆಲಕಚ್ಚಿವೆ. ರಿಪೋರ್ಟ್ ಕಾರ್ಡ್ ಮುಂದಿಟ್ಟರೆ, ಸತ್ಯವೇನೆಂಬುದು ಜನರಿಗೆ ತಿಳಿಯುತ್ತದೆ ಎಂದು ಆರ್.ಅಶೋಕ್ ಸವಾಲೆಸೆದರು.

ಬೆಳಗಾವಿ ಜ್ವಾಲೆ

ಬೆಳಗಾವಿಯಿಂದ ವ್ಯಾಪಿಸಿದ ಬೆಂಕಿಯು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಆಪೋಷಣ ಮಾಡಿತ್ತು. ಈ ಬಾರಿಯೂ ಮತ್ತೆ ಬೆಳಗಾವಿಯಿಂದ ಹೊರಹೊಮ್ಮಿದ ಬೆಂಕಿ ಜ್ವಾಲೆ ದುಬೈವರೆಗೂ ಚಾಚಿಕೊಂಡಿದ್ದು, ಸರ್ಕಾರಕ್ಕೆ ಬಿಸಿ ತಾಗಿಸಿದೆ.

ಕಾಂಗ್ರೆಸ್ ಪಕ್ಷದೊಳಗಿನ ಒಡಕಿನ ಧ್ವನಿ ಬಲವಾಗತೊಡಗಿವೆ. ಡಿ.ಕೆ.ಸುರೇಶ್ ಭೇಟಿ ಮಾಡಿದ ನಂತರವೂ ಪ್ರವಾಸ ಹೋಗಿದ್ದಾರೆ. ಸರ್ಕಾರದಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲವೆಂದು ಆರ್.ಅಶೋಕ್ ಹೇಳಿದರು.