ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಅದಕ್ಕಾಗಿ ಸಿದ್ದತೆಗಳನ್ನು ಭರದಿಂದಲೇ ಆರಂಭಿಸಿದೆ. ದಕ್ಷಿಣದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಅಧಿಕಾರ ಕಳೆದುಕೊಳ್ಳಬಾರದು ಎಂಬುದು ವರಿಷ್ಠರ ಸೂಚನೆಯಾಗಿದೆ. ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡರು ರಾಜ್ಯ ನಾಯಕರಿಗೆ ದೊಡ್ಡ ಟಾಸ್ಕ್ ಕೊಟ್ಟು ಕಳುಹಿಸಿದ್ದಾರೆ. ಅದಕ್ಕೆ ತಕ್ಕಂತೆ ಸಿದ್ಧತೆಯನ್ನು ಅತ್ಯಂತ ಉತ್ಸಾಹದಿಂದ ನಡೆಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ನಡೆಸಿರುವ ಮೂರು ಸಮೀಕ್ಷೆಗಳಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣ ಇಲ್ಲದೇ ಇರುವುದರಿಂದಲೇ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ದೇಶದ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ದುರ್ಬಲವಾಗಿದ್ದರೂ, ರಾಜ್ಯದಲ್ಲಿ ಪ್ರಬಲವಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಸುಲಭವಿಲ್ಲ. ರಾಜ್ಯ ಸರ್ಕಾರದ ವರ್ಚಸ್ಸು ನಿರೀಕ್ಷೆಯಂತೆ ವೃದ್ಧಿಯಾಗಿಲ್ಲ. ಆದ್ದರಿಂದಲೇ ವರಿಷ್ಠರು ಬೇರೆ ಬೇರೆ ತಂತ್ರಗಳನ್ನು ರೂಪಿಸಲು ಸೂಚನೆ ನೀಡಿದ್ದಾರೆ.
ವಾರ್ ರೂಂ ಆರಂಭ: ಬಿಜೆಪಿ ಯಾವುದೇ ರಾಜ್ಯದಲ್ಲಿ ಸಿದ್ಧತೆ ಆರಂಭಿಸುವುದೇ ವಾರ್ ರೂಂ ಸ್ಥಾಪನೆಯೊಂದಿಗೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿಯೇ ವಾರ್ ರೂಂ ಆಗಸ್ಟ್ ಮೊದಲ ವಾರದಿಂದ ಆರಂಭಿಸಲು ಪ್ರತ್ಯೇಕ ಕಟ್ಟಡವನ್ನು ಬಾಡಿಗೆ ಪಡೆಯಲಾಗುತ್ತಿದೆ. ವಿಧಾನ ಪರಿಷತ್ ಸದಸ್ಯ ನವೀನ್ ಅವರಿಗೆ ಇದರ ಜವಾಬ್ದಾರಿ ನೀಡಲಾಗುತ್ತಿದೆ.
ವಾರ್ ರೂಂ ಪ್ರತಿನಿತ್ಯದ ಬೆಳವಣಿಗೆಗಳನ್ನು ವಿಶ್ಲೇಷಣೆ ಮಾಡಲಿದೆ. ಬೂತ್ ಸಮಿತಿಯಿಂದ ಹಿಡಿದು ದೆಹಲಿಯಲ್ಲಿರುವ ರಾಷ್ಟ್ರೀಯ ವಾರ್ ರೂಂ ತನಕ ಸಂಪರ್ಕ ಹೊಂದಿರುತ್ತದೆ. ಸ್ಥಳೀಯ ಮಟ್ಟದಿಂದ ಬರುವ ಮಾಹಿತಿಯನ್ನು ಆಧರಿಸಿ ಪಕ್ಷ ಎಲ್ಲಿ ಪ್ರಬಲವಾಗಿದೆ, ಎಲ್ಲಿ ದುರ್ಬಲವಾಗಿದೆ ಎಂಬ ಮಾಹಿತಿಯನ್ನು ಮುಖಂಡರಿಗೆ ರವಾನಿಸುತ್ತದೆ. ದುರ್ಬಲವಾಗಿರುವ ಪ್ರದೇಶದಲ್ಲಿ ಪ್ರಬಲ ಮಾಡಲು ಸ್ಥಳೀಯ ಅಂಕಿ-ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ನಾಯಕರಿಗೆ ತಲುಪಿಸುತ್ತದೆ. ಏನೇನು ಚಟುವಟಿಕೆಗಳು ನಡೆಯಬೇಕಾಗಿದೆ? ಕಾರ್ಯತಂತ್ರಗಳು ಏನೇನು ಇರಬೇಕಾಗುತ್ತದೆ? ಪ್ರತಿಪಕ್ಷಗಳನ್ನು ಹಿಮ್ಮೆಟ್ಟಿಸುವುದು ಹೇಗೆ? ಎಂಬೆಲ್ಲ ಮಾಹಿತಿ ಸಿದ್ದವಾಗುವುದೇ ವಾರ್ ರೂಂನಲ್ಲಿ.
ಮಾಧ್ಯಮಗಳ ಬಳಕೆ: ಮುದ್ರಣ, ದೃಶ್ಯ ಮಾಧ್ಯಮಗಳೇ ಅಲ್ಲದೇ, ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರದ ತಂತ್ರಗಳನ್ನು ಆಗಸ್ಟ್ ಅಥವಾ ಸೆಪ್ಟಂಬರ್ನಿಂದ ತೀವ್ರಗೊಳಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಜತೆಗೆ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಏನೇನು ಮಾಡಲಿದೆ ಎಂಬುದನ್ನು ತಿಳಿಸಲಾಗುತ್ತದೆ. ಇದರ ಜತೆಗೆ, ಹಿಂದುತ್ವ ವಿಚಾರವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಹ ಕಾರ್ಯಕರ್ತರಿಗೆ ಕಾಲಕಾಲಕ್ಕೆ ಮಾಹಿತಿ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಪಕ್ಷಗಳಿಗೆ ಉತ್ತರ ನೀಡುವುದರ ತರಬೇತಿಯನ್ನು ಡಿಸೆಂಬರ್ನಿಂದ ಆರಂಭಿಸಲಾಗುತ್ತದೆ. ಬೂತ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ಗಳನ್ನು ರಚನೆ ಮಾಡಲಾಗುತ್ತದೆ.
ಮೋರ್ಚಾ ಸಮಾವೇಶಗಳು: ಹಿಂದುಳಿದ ಜಾತಿಗಳ ಸಮಾವೇಶಗಳು ಒಂದೆಡೆಯಾದರೆ ವಿವಿಧ ಮೋರ್ಚಾಗಳ ಸಮಾವೇಶಗಳನ್ನು ಡಿಸೆಂಬರ್ನಿಂದ ಏಪ್ರಿಲ್ ತನಕ ನಿರಂತರವಾಗಿ ನಡೆಸಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ಮೋರ್ಚಾ ಸಮಾವೇಶ ನಡೆಯಲಿದ್ದು, ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ. ಮೋರ್ಚಾ ಸಮಾವೇಶಗಳ ಮೂಲಕವೇ ಚುನಾವಣೆಯ ಪ್ರಚಾರ ತೀವ್ರಗೊಳಿಸಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ಸಣ್ಣ ಸಣ್ಣ ಜಾತಿಗಳ ಸಮಾವೇಶ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಣ್ಣ ಸಣ್ಣ ಜಾತಿಗಳನ್ನು ಸೆಳೆಯಬೇಕು ಎಂಬುದು ಬಿಜೆಪಿ ವರಿಷ್ಠರ ಬಹುಮುಖ್ಯ ಚಿಂತನೆಯಾಗಿದೆ. ಆ ಮೂಲಕ ಹೊಸ ಮತದಾರರನ್ನು ಸೆಳೆಯುವುದು ಉದ್ದೇಶವಾಗಿದೆ. ಅದಕ್ಕಾಗಿ ಸಣ್ಣ ಸಣ್ಣ ಜಾತಿಗಳ ಸಮಾವೇಶವನ್ನು ಪ್ರತಿ ಜಿಲ್ಲೆಯಲ್ಲಿಯೂ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಹಿತ ಪ್ರಮುಖ ಮುಖಂಡರನ್ನು ಹಿಂದುಳಿದ ವರ್ಗಗಳ ಸಮಾವೇಶಗಳಿಗೆ ಕರೆದುಕೊಂಡು ಹೋಗಿ ಅವರ ಮೂಲಕ ಸೆಳೆಯಲಾಗುತ್ತದೆ. ಪ್ರತಿ ಸಮಾವೇಶಕ್ಕೆ ನಾಲ್ಕರಿಂದ ಐದು ಸಾವಿರ ಜನರನ್ನು ಸೇರಿಸಲಾಗುತ್ತದೆ. ಕಾಂಗ್ರೆಸ್ ಜತೆಗಿರುವ ಸಮುದಾಯಗಳನ್ನು ಸೆಳೆಯುವುದು ಬಿಜೆಪಿಯ ಉದ್ದೇಶವಾಗಿದೆ.
ಪ್ರತ್ಯೇಕ ಕಾಲ್ ಸೆಂಟರ್: ವಾರ್ ರೂಂನಲ್ಲಿಯೇ ಪ್ರತ್ಯೇಕ ಕಾಲ್ ಸೆಂಟರ್ ಇರುತ್ತದೆ. ಬೂತ್ ಸಮಿತಿಗಳಿಂದ ಹಿಡಿದು ಕಾರ್ಯಕರ್ತರು ನೇರವಾಗಿ ಸಂಪರ್ಕ ಮಾಡಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ದಿನದ 24 ಗಂಟೆಗಳ ಕಾಲ ಕಾಲ್ ಸೆಂಟರ್ ಕಾರ್ಯ ನಿರ್ವಹಣೆ ಮಾಡಲಿದೆ.