ನ್ಯೂಸ್

ಬಿಜೆಪಿ ₹7 ಸಾವಿರ ಕೋಟಿ ಒಡೆಯ; ಜಗತ್ತಿನ ಅತಿದೊಡ್ಡ ಪಕ್ಷ ದೇಶದಲ್ಲೇ ಶ್ರೀಮಂತ

ನವದೆಹಲಿ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಂಡಿರುವ ಬಿಜೆಪಿ 2024ರ ಮಾ.31ಕ್ಕೆ ಅನ್ವಯವಾಗುವಂತೆ ಒಟ್ಟಾರೆ 7,113.80 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಾಂಗ್ರೆಸ್ ಬಳಿ 857.15 ಕೋಟಿ ರೂ. ಮೊತ್ತವಿದೆ ಎಂದು ಆಯೋಗ ವಿವರ ನೀಡಿದೆ.

ಚುನಾವಣಾ ಆಯೋಗಕ್ಕೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ಲೋಕಸಭೆ ಚುನಾವಣೆ ಘೊಷಣೆಯಾದ ವೇಳೆ 2023-24ರ ಅವಧಿಯಲ್ಲಿ ಬಿಜೆಪಿ 1,754.06 ಕೋಟಿ ರೂ. ಖರ್ಚು ಮಾಡಿದೆ. 2022-23ರಲ್ಲಿ ಖರ್ಚು ಮಾಡಿದ್ದಕ್ಕೆ ಹೋಲಿಸಿದರೆ ಈ ಪ್ರಮಾಣದಲ್ಲಿ 1,092 ಕೋಟಿ ರೂ. ಗಿಂತ ಹೆಚ್ಚು ಅಂದರೆ ಖರ್ಚಿನಲ್ಲಿ ಶೇ.60 ರಷ್ಟು ಏರಿಕೆಯಾಗಿದೆ.

2023-24ರಲ್ಲಿ ಕಾಂಗ್ರೆಸ್ 619.67 ಕೋಟಿ ರೂ. ಖರ್ಚು ಮಾಡಿದ್ದರೆ, 2022-23ರಲ್ಲಿ 192.56 ಕೋಟಿ ರೂ. ಖರ್ಚು ಮಾಡಿತ್ತು. 2023-24ರ ಅವಧಿಯಲ್ಲಿ ಬಿಜೆಪಿಯು (ನಿಷೇಧಿತ ಚುನಾವಣಾ ಬಾಂಡ್​ಗಳ ಮೂಲಕ) 1,685.69 ಕೋಟಿ ರೂ. ಕೊಡುಗೆ ಸ್ವೀಕರಿಸಿದ್ದರೆ, 2022 - 23ರಲ್ಲಿ 1294.15 ಕೋಟಿ ರೂ. ಹಣವನ್ನು ದಾನದ ರೂಪದಲ್ಲಿ ಸ್ವೀಕರಿಸಿದೆ. ಇದರ ಜತೆಗೆ, ಬಿಜೆಪಿ 2023-24 ರಲ್ಲಿ 2,042.75 ಕೋಟಿ ರೂ. ಮತ್ತು 2022-23ರಲ್ಲಿ 648.42 ಕೋಟಿ ರೂ.ಗಳನ್ನು ಇತರ ಮೂಲಗಳಿಂದ ಕೊಡುಗೆಯಾಗಿ ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕಾಂಗ್ರೆಸ್​ಗೆ ₹1,229 ಕೋಟಿ ಆದಾಯ: ಆಯೋಗಕ್ಕೆ ಕಾಂಗ್ರೆಸ್ ಸಲ್ಲಿಸಿದ್ದ ಆಡಿಟ್ ವರದಿಯಲ್ಲಿ ಅನುದಾನ, ದೇಣಿಗೆ ಮತ್ತು ಕೊಡುಗೆಗಳ ಮೂಲಕ 1129.67 ಕೋಟಿ ರೂ. ಸೇರಿ 2023-24ರ ಅವಧಿಯಲ್ಲಿ ಒಟ್ಟು 1,225.11 ಕೋಟಿ ಮೊತ್ತವನ್ನು ಸ್ವೀಕರಿಸಿದೆ ಎಂದು ದಾಖಲಾಗಿದೆ. ಇದರಲ್ಲಿ 2024ರ ಮಾ.31ಕ್ಕೆ ಕೊನೆಗೊಂಡ ವರ್ಷದಲ್ಲಿ ಎಲೆಕ್ಟ್ರಾನಿಕ್ ಬಾಂಡ್​ಗಳ ಮೂಲಕ ಸ್ವೀಕರಿಸಿದ 828.36 ಕೋಟಿ ರೂ. ಇದರಲ್ಲಿ ಕೂಡ ಸೇರಿದೆ.

ಕೈನಿಂದ 619.67 ಕೋಟಿ ರೂ. ವೆಚ್ಚ: ಕಾಂಗ್ರೆಸ್ 2023-24ರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 207.94 ಕೋಟಿ ರೂ. ಮತ್ತು ಮುದ್ರಣ ಮಾದ್ಯಮಕ್ಕೆ 43.73 ಕೋಟಿ ರೂ. ಖರ್ಚು ಮಾಡಿದೆ. 2023-24ರಲ್ಲಿ ವಿಮಾನ/ಹೆಲಿಕಾಪ್ಟರ್​ಗಳಿಗೆ 62.65 ಕೋಟಿ ರೂ. ಖರ್ಚು ಮಾಡಿದ್ದರೆ, ಪಕ್ಷದ ಅಭ್ಯರ್ಥಿಗಳಿಗೆ 238.55 ಕೋಟಿ ರೂ. ಆರ್ಥಿಕ ಸಹಾಯ ನೀಡಿದೆ.

ಕಮಲದಿಂದ ₹1,754 ಕೋಟಿ ಖರ್ಚು

  • ಬಿಜೆಪಿ ವಿದ್ಯುನ್ಮಾನ ಮಾಧ್ಯಮದಲ್ಲಿ 434.84 ಕೋಟಿ ಮತ್ತು ಮುದ್ರಣ ಮಾಧ್ಯಮಕ್ಕೆ 115.62 ಕೋಟಿ ರೂ. ಸೇರಿ ಒಟ್ಟು 591 ಕೋಟಿ ರೂ. ಹಣವನ್ನು ಜಾಹೀರಾತಿಗಾಗಿ ಖರ್ಚು ಮಾಡಿದೆ.
  • ಬಿಜೆಪಿ 2023-24ರಲ್ಲಿ ವಿಮಾನ/ಹೆಲಿಕಾಪ್ಟರ್​ಗಳಿಗೆ 174 ಕೋಟಿ ರೂ., 2022-23ರಲ್ಲಿ 78.23 ಕೋಟಿ ರೂ. ಮತ್ತು ಪಕ್ಷದ ಅಭ್ಯರ್ಥಿಗಳಿಗಾಗಿ 191.06 ಕೋಟಿ ರೂ. ಆರ್ಥಿಕ ನೆರವು ನೀಡಿದೆ.
  • 2024ರಲ್ಲಿ ಬಿಜೆಪಿ ಸಭಾ ವೆಚ್ಚ ನಿರ್ವಹಣೆಗಾಗಿ 84.32 ಕೋಟಿ ರೂ. ಮತ್ತು 2023-24ರಲ್ಲಿ ಮೋರ್ಚಾ, ರಾಲಿ, ಆಂದೋಲನ ಮತ್ತು ಕಾಲ್ ಸೆಂಟರ್ ವೆಚ್ಚಗಳನ್ನು ನಿರ್ವಹಿಸಲು 75.14 ಕೋಟಿ ರೂ. ಖರ್ಚು ಮಾಡಿದೆ.

ಮುಖ್ಯಾಂಶಗಳು

  • ಬಿಜೆಪಿ ಬಳಿಯಿದೆ ಒಟ್ಟು 7,113.80 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್
  • ಕಾಂಗ್ರೆಸ್​ಗಿಂತ 6 ಪಟ್ಟು ಹೆಚ್ಚು ಹಣ ಕಮಲ ಪಕ್ಷದಲ್ಲಿ
  • ಕಾಂಗ್ರೆಸ್​ಗೆ ಸಂಗ್ರಹವಾಗಿದ್ದು ಒಟ್ಟಾರೆ 1,294 ಕೋಟಿ ರೂ.
  • ಚುನಾವಣೆಗೆ ಖರ್ಚು ಮಾಡುವುದರಲ್ಲೂ ಕಮಲ ಪಡೆ ಮುಂದೆ
  • ಲೋಕಸಭೆ ಎಲೆಕ್ಷನ್​ಗೆ ಬಿಜೆಪಿಯಿಂದ 1754 ಕೋಟಿ ರೂ. ಖರ್ಚು
  • ಸಂಸತ್ ಚುನಾವಣೆಗೆ ಕಾಂಗ್ರೆಸ್ ವೆಚ್ಚ 619 ಕೋಟಿ ರೂಪಾಯಿ
  • ಅಭ್ಯರ್ಥಿಗಳಿಗೆ ನೆರವು ನೀಡುವುದರಲ್ಲಿ ಕಾಂಗ್ರೆಸ್​ವೆುೕಲುಗೈ
  • ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಗೆ -ಠಿ;131.57 ಕೋಟಿ ಖರ್ಚು