ನ್ಯೂಸ್

ಚಂದ್ರಬಾಬುಗೆ ಪ್ರಧಾನಿ ಮೋದಿ ಬಂಪರ್ ಆಫರ್.. ಎನ್​ಡಿಎ ಸಂಚಾಲಕ!

ಅಮರಾವತಿ: ಆಂಧ್ರದ ಜೊತೆಗೆ ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ಮುಖ್ಯಸ್ಥರನ್ನಾಗಿಸಲು ಬಿಜೆಪಿ ಯೋಚಿಸಿದೆ.

ಆಂಧ್ರಪ್ರದೇಶ ಚುನಾವಣಾ ಫಲಿತಾಂಶದಲ್ಲಿ ತೆಲುಗು ದೇಶಂ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಮೈತ್ರಿಯ ಭಾಗವಾಗಿ ಟಿಡಿಪಿ 144 ಶಾಸಕಾಂಗ ಸ್ಥಾನಗಳಲ್ಲಿ ಸ್ಪರ್ಧಿಸಿ 130 ಕ್ಕೂ ಹೆಚ್ಚು ಕಡೆ ಗೆದ್ದಿದೆ. ಸ್ಪರ್ಧಿಸಿದ್ದ 10 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಬಿಜೆಪಿ, 21 ಸ್ಥಾನಗಳಲ್ಲಿ ಜನಸೇನೆ ಗೆಲುವು ಸಾಧಿಸಿದೆ. ಇದರೊಂದಿಗೆ ಮೈತ್ರಿಕೂಟ 165ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆಂಧರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವುದರ ಜೊತೆಗೆ, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಟಿಡಿಪಿ ನಿರ್ಣಾಯಕವಾಗಲಿದೆ. ಈ ಹಿನ್ನೆಲೆಯಲ್ಲಿ ಚಂದ್ರಬಾಬುವನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖರನ್ನಾಗಿಸಲು ಬಿಜೆಪಿ ಚಿಂತನೆ ನಡೆಸಿರುವಂತಿದೆ.

ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಚಂದ್ರಬಾಬು ನಾಯ್ಡು ಎನ್ ಡಿಎ ಸಂಚಾಲಕರಾಗಿದ್ದರು. ಸದ್ಯ ಎನ್‌ಡಿಎ ಸಂಚಾಲಕ ಹುದ್ದೆಯನ್ನು ಚಂದ್ರಬಾಬು ಅವರಿಗೆ ವಹಿಸಲು ಬಿಜೆಪಿ ನಾಯಕತ್ವ ಚಿಂತನೆ ನಡೆಸಿದೆಯಂತೆ.

ಪ್ರಸ್ತುತ ಎನ್‌ಡಿಎಯಲ್ಲಿ ಬಿಜೆಪಿ ನಂತರ ಟಿಡಿಪಿ ಹೆಚ್ಚು ಎಂಪಿ ಸ್ಥಾನಗಳನ್ನು ಹೊಂದಿರುವ ಪಕ್ಷವಾಗಿದ್ದು, ನಿತೀಶ್ ನೇತೃತ್ವದ ಜೆಡಿಯು ನಂತರದ ಸ್ಥಾನದಲ್ಲಿದೆ. ಇದರೊಂದಿಗೆ ಇತರೆ ಪಕ್ಷಗಳನ್ನು ಎನ್‌ಡಿಎಗೆ ಕರೆತರಲು ಮುಂದಾದರೆ ಚಂದ್ರಬಾಬು ಅವರಿಗೆ ಸಂಚಾಲಕ ಜವಾಬ್ದಾರಿಯನ್ನು ವಹಿಸಿದಂತೆ ಕಾಣುತ್ತಿದೆ.

ಎನ್ ಡಿಎ ಸಂಚಾಲಕನ ಜವಾಬ್ದಾರಿಗಳ ಕುರಿತು ಈಗಾಗಲೇ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಚಂದ್ರಬಾಬು ಅವರೊಂದಿಗೆ ಚರ್ಚಿಸಿರುವಂತಿದೆ. ಎಪಿಯಲ್ಲಿ ಭರ್ಜರಿ ಗೆಲುವಿಗಾಗಿ ಚಂದ್ರಬಾಬು ಬಾಬು ಅವರನ್ನು ಅಭಿನಂದಿಸಿದ ಮೋದಿ, ಅಮಿತ್ ಶಾ ಅವರು ಎನ್‌ಡಿಎ ಸಂಚಾಲಕನ ಕುರಿತು ಟಿಡಿಪಿ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಚಂದ್ರಬಾಬು ನಾಯ್ಡು ರಾಷ್ಟ್ರ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ.