ನ್ಯೂಸ್

ಕಾಂಗ್ರೆಸ್​ ಶಾಸಕರಿಗೆ 15 ಕೋಟಿ ರೂ. ಆಫರ್​; ರಾಜಸ್ಥಾನದಲ್ಲೂ ಆಪರೇಷನ್​ ಕಮಲ?

ಜೈಪುರ: ಕೀಳು ರಾಜಕೀಯ ಮಾಡುತ್ತಿರುವ ಬಿಜೆಪಿ, ರಾಜಸ್ಥಾನ ಸರ್ಕಾರವನ್ನು ಕೆಳಗಿಳಿಸಲು ಕಾಂಗ್ರೆಸ್​ ಶಾಸಕರನ್ನು ಖರೀದಿಸುತ್ತಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸಿದ್ದಾರೆ.

ಪಕ್ಷ ನಿಷ್ಠೆ ಬದಲಿಸಲು ಕಾಂಗ್ರೆಸ್​ ಶಾಸಕರಿಗೆ 15 ಕೋಟಿ ರೂ. ನಗದು ಹಾಗೂ ವಿವಿಧ ಆಮಿಷವೊಡ್ಡುತ್ತಿದೆ ಎಂದು ಗೆಹ್ಲೋಟ್​ ನೇರವಾಗಿ ಆರೋಪ ಮಾಡಿದ್ದಾರೆ. ಸರ್ಕಾರ ಕೋವಿಡ್​ ನಿಯಂತ್ರಣಕ್ಕೆ ಎಲ್ಲ ಪ್ರಯ್ನಗಳನ್ನು ಮಾಡುತ್ತಿದ್ದರೆ, ಬಿಜೆಪಿ ತೊಂದರೆಗಳನ್ನು ಉಮಟು ಮಾಡುವಲ್ಲಿ ತೊಡಗಿದೆ ಎಂದು ಗೆಹ್ಲೋಟ್​ ಟೀಕಿಸಿದ್ದಾರೆ.

ಕಾಂಗ್ರೆಸ್​ ಎಲ್ಲರನ್ನೂ ತನ್ನೊಂದಿಗೆ ಕೊಂಡೊಯ್ಯಲು ನೋಡುತ್ತಿದ್ದರೆ, ಬಿಜೆಪಿ ತನ್ನೆಲ್ಲ ಮಿತಿಗಳನ್ನು ದಾಟುತ್ತಿದೆ. ಶಾಸಕರನ್ನು ಬಲೆಗೆ ಬೀಳಿಸಿಕೊಳ್ಳುವ ಮೂಲಕ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ನೇತೃತ್ವದ ಸರ್ಕಾರವನ್ನು ಬಿಜೆಪಿ ಕೆಳಗಿಳಿಸಿದೆ. ಗುಜರಾತ್​​ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್​ ಶಾಸಕರನ್ನು ಖರೀದಿಸಿದೆ ಎಂದು ಗೆಹ್ಲೋಟ್​ ಆರೋಪಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್​ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡಿ ಅವರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಅವರ ಯತ್ನ ಯಶಸ್ವಿಯಾಗಲು ಕಾಂಗ್ರೆಸ್​ ಬಿಡುವುದಿಲ್ಲ ಎಂದು ಶಾಸಕರು ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರ ಕೈಗೂಡಿಲ್ಲ. ಕಾಂಗ್ರೆಸ್​ ಶಾಸಕರು, ಪಕ್ಷೇತರರು ಹಾಗೂ ಉಳಿದ ಪಕ್ಷಗಳ ಶಾಸಕರು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಶಾಸಕರು ಹೇಳಿದ್ದಾರೆ.

ಶಾಸಕರಾದ ಲಖನ್​ ಸಿಂಗ್​ ಮೀನಾ, ಜೋಗಿಂದರ್​ ಸಿಂಗ್​, ಮುಖೇಶ್​ ಭಾಖರ್​, ವೇದಪ್ರಕಾಶ್​ ಸೋಲಂಕಿ, ಹರೀಶ್​ ಮೀನಾ, ಅಶೋಕ್​ ಭೈರ್ವಾ, ಶಕುಂತಲಾ ರಾವತ್​ ಮೊದಲಾದವರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್​ 107 ಶಾಸಕರನ್ನು ಹೊಂದಿದೆ. ಇದರೊಂದಿಗೆ 12 ಪಕ್ಷೇತರರ ಬೆಂಬಲವನ್ನು ಪಡೆದಿದೆ. ಇದಲ್ಲದೇ, ಬಬೇರೆ ಪಕ್ಷಗಳ ಐವರು ಸರ್ಕಾರದ ಬೆಂಬಲಿಸಿದ್ದಾರೆ.