ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಆ.4ರಂದು ನಡೆಸಲು ಉದ್ದೇಶಿತ ಪ್ರತಿಭಟನೆ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ಮಾಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿ, ಹತಾಶೆಯ ಹೊಸ ಕಪಟ ನಾಟಕವನ್ನು ಕಾಂಗ್ರೆಸ್ ಪಕ್ಷ ಶುರು ಮಾಡಿದೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಭಾರತೀಯ ಸೇನೆ ಬಗ್ಗೆಯೂ ರಾಹುಲ್ ಗಾಂಧಿ ಟೀಕಿಸುವುದು ಹೊಸದಲ್ಲವೆಂದರು.
ಚುನಾವಣಾ ಆಯೋಗವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ, ಲೋಕಸಭೆ ಚುನಾವಣೆಯಲ್ಲಿ ಒಂಭತ್ತು ಸ್ಥಾನಗಳು, ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು ? ಜನಾದೇಶ ಅಪಮಾನಿಸಿದಂತಲ್ಲವೆ ? ಎಂದು ಪ್ರಶ್ನಿಸಿದ್ದಾರೆ.
ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿಯವರಲ್ಲಿ ದಾಖಲೆಗಳು, ಸಾಕ್ಷಾೃಧಾರಗಳಿದ್ದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿ. ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ ಎಂದು ಸವಾಲು ಹಾಕಿದರು.
ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಜನರಲ್ಲಿ ಸಂಶಯ, ಅಪನಂಬಿಕೆ ಹುಟ್ಟಿ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ತರುವ ಬೆಳವಣಿಗೆಯಾಗಿದೆ ಎಂದು ಬಿ.ವೈವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಮೇಲೆ ಆರೋಪ, ಅಕ್ರಮದ ಅನುಮಾನ ಬಿತ್ತಲು ರಾಹುಲ್ ಗಾಂಧಿ ಮುಂದಾಗಿದ್ದರೆ, ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ ಸಿಕ್ಕಂತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕುಟುಕಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೆ ದೂರು ನೀಡಬಹುದಾಗಿತ್ತು. ಈಗ ಪ್ರತಿಭಟನೆಗೆ ಮುಂದಾಗಿರುವುದು ನೋಡಿದರೆ ರಾಹುಲ್ ಗಾಂಧಿಗೆ ಬುದ್ಧಿಯಿಲ್ಲ, ಸಾಮಾನ್ಯ ಜ್ಞಾನ ಇಲ್ಲವೆಂಬುದು ತೋರಿಸಿಕೊಡುತ್ತದೆ ಎಂದು ಕಿಡಿಕಾರಿದರು.
ಕೈಲಾಗದವರು ಮೈಪರಚಿಕೊಂಡರು ಎಂಬ ಹತಾಶ ಸ್ಥಿತಿಯಲ್ಲಿರುವ ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ವಿರುದ್ಧ ಕ್ಯಾತೆ ತೆಗೆದಿದ್ದಾರೆ. ಬಾಣಂತಿಯರ ಸಾವು, ಕಾಲ್ತುಳಿತ ದುರಂತ ಸಂಭವಿಸಿದಾಗ ಬಾರದವರು ಈಗ ಬರುತ್ತಿದ್ದಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.