ನ್ಯೂಸ್

ಜ್ಞಾನ ಯೋಗಾಶ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ: ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಕೆ

ವಿಜಯಪುರ: ಸಿಂದಗಿಯಲ್ಲಿ ಆಯೋಜನೆಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ವಿಜಯಪುರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜ್ಞಾನ ಯೋಗಾಶ್ರಮಕ್ಕೆ ಶನಿವಾರ ಭೇಟಿ ನೀಡಿದರು.

ನಡೆದಾಡುವ ದೇವರು ಪರಮಪೂಜ್ಯ ಲಿಂ.ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಗದ್ದುಗೆಗೆ ಭಕ್ತಿ ಪೂರ್ವಕವಾಗಿ ನಮಿಸಿದರು. ಸಿದ್ದೇಶ್ವರ ಶ್ರೀಗಳು ಕೊನೆಯ ದಿನಗಳನ್ನು ಕಳೆದ ಕೋಣೆಗೆ ನಡ್ಡಾ ಭೇಟಿ ನೀಡಿ ನಮಸ್ಕರಿಸಿರು. ಆಶ್ರಮದ ಆವರಣದಲ್ಲಿಯೇ ಇರುವ ಚಿಕ್ಕ ಕೋಣೆಯಲ್ಲಿ ಶ್ರೀಗಳು ಅನಾರೋಗ್ಯ ಕಾಲದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಕೋಣೆಗೆ ನಡ್ಡಾ ಭೇಟಿ ನೀಡಿ ಪೂಜ್ಯರನ್ನು ನೆನೆದರು.

ಬಳಿಕ ಅಲ್ಲಿನ ಪೂಜ್ಯರುಗಳೊಂದಿಗೆ ಮಾತನಾಡಿದರು‌. ಸಿದ್ದೇಶ್ವರ ಸ್ವಾಮೀಜಿಗಳ ವಿರಚಿತ ಇಂಗ್ಲಿಷ್ ಭಾಷೆಯ ಪುಸ್ತಕವನ್ನ ನಡ್ಡಾ ಅವರಿಗೆ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ನೀಡಿದರು.

ನಂತರ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಿನ್ನೆಲೆ ಗೋಡೆ ಬರಹ, ಕರಪತ್ರ ಹಂಚಿಕೆ ಹಾಗೂ ಮಿಲ್ಡ್​ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿ ವಿವಿಧ ಮುಖಂಡರು ಸಾಥ್ ನೀಡಿದರು.