ನ್ಯೂಸ್

ಕಾಂಗ್ರೆಸ್ಸಿನದು ಫ್ಯಾಮಿಲಿ ಪಾಲಿಟಿಕ್ಸ್ ಜತೆಗೆ ಜಾತಿ ರಾಜಕಾರಣ; ನಡ್ಡಾ ಟೀಕೆ

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿರುವ ವಿಜಯಸಂಕಲ್ಪ ಅಭಿಯಾನಕ್ಕೆ ಸಿಂದಗಿಯಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌ ನಡ್ಡಾ ಜ್ಯೋತಿ ಬೆಳಗಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ‌ ಎಲ್ಲರದ್ದಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ, ಎಂಬ ಧ್ಯೇಯದೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಪರಂಪರೆ, ಸಂಸ್ಕೃತಿ, ಕವಿ, ಸಾಹಿತ್ಯ, ಸಂಪ್ರದಾಯದ ಗೌರವನ್ನು ಪ್ರಧಾನಿ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾರತ ತೋಡೋ ನಡೆ ಅನುಸರಿಸುತ್ತಿದ್ದಾರೆ. ಸಮಾಜವನ್ನು ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಅರಾಜಕತೆ ಸೃಷ್ಠಿಸುತ್ತಿದ್ದು, ಜಾತಿವಾದ, ಕುಟುಂಬವಾದ ಅನುಸರಿಸುತ್ತಿದೆ‌. ಅಭಿವೃದ್ಧಿ ಮಂತ್ರ ಕಡೆಗಣಿಸಿದೆ ಎಂದು ಟೀಕಿಸಿದರು.

ದೇಶದ ಪ್ರಗತಿಯಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾಗಿದೆ. ಡಿಜಿಟಲ್ ಇಂಡಿಯಾ, ಇಲೆಕ್ಟ್ರಾನಿಕ್ ಪ್ರಗತಿ, ಕೈಗಾರೀಕರಣ ಬಗ್ಗೆ ಇಂದು ಮಾತನಾಡುತ್ತಿದ್ದೇವೆ ಎಂದರೆ ಅದರಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾಗಿದೆ ಎಂದರು.

ಕಾಂಗ್ರೆಸ್ ಭಾರತದ ಹಳ್ಳಿಗಳಲ್ಲಿ ಇಂಟರ್​ನೆಟ್ ಸೌಲಭ್ಯ ಇಲ್ಲ ಎಂದು ಟೀಕಿಸುತ್ತಿದ್ದಾರೆ. ಇಂದು ಇಂಟರ್​ನೆಟ್ ಹಳ್ಳಿಗೆ ಹೇಗೆ ತಲುಪಿತು, ಆಧಾರ್ ಹೇಗೆ ಸಿಕ್ಕಿತು? ಆಫ್ಟಿಕಲ್ ಫೈಬರ್ ಇಂದು 2 ಲಕ್ಷಕ್ಕೂ ಅಧಿಕ ಕಿ.ಮೀ ಸಂಪರ್ಕ ಸಾಧಿಸುತ್ತಿದೆ.

ಮೊಬೈಲ್ ಶೇ.98 ಎಷ್ಟು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಸ್ಟೀಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆಟೋ ಮೊಬೈಲ್​ಗಳನ್ನು ಜಪಾನ್​ನಿಂದ ತರಿಸಲಾಗುತ್ತಿತ್ತು. ಇಂದು ಭಾರತ ಆಟೋ ಮೊಬೈಲ್ ತಯಾರಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.