ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ” ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. “ತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಇಲ್ಲಿ ಮೆಟ್ರೋ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜೊತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳು, ಸಣ್ಣ ಬಸ್ ಗಳಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಖಾಸಗಿ ಬಸ್ ಗಳಿಗೆ ಅವಕಾಶ ನೀಡಿದರೆ ಏನು ಉಪಯೋಗ ಎಂದು ಚರ್ಚೆ ಮಾಡಬೇಕಿದೆ” ಎಂದರು.
ಸಂಸದರು ಬನ್ನಿ, ಪ್ರಧಾನಿ ಭೇಟಿ ಮಾಡಿ ಅನುದಾನ ಕೇಳೋಣ
“ಅವರು ಬಿಎಂಎಲ್ ಟಿ ಮಾಡಬೇಕು ಎಂದು ಹೇಳಿದರು. ಆಗ ನಾನು ನಿಮ್ಮ ಕಾಲದಲ್ಲಿ ಯಾಕೆ ಮಾಡಲಿಲ್ಲ ಎಂದು ಕೇಳಿದೆ? ಅದಕ್ಕೆ ಅವರು ಆಗ ಆಗಲಿಲ್ಲ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಕೇಳಿದೆ. ನಿಮ್ಮ ಸಂಸದರೆಲ್ಲ ಬನ್ನಿ, ನಾನು ಕೂಡ ಬರುತ್ತೇನೆ. ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಾಯ ಮಾಡೋಣ ಎಂದು ಹೇಳಿದೆ” ಎಂದರು.