ಭದೋಹಿ: ಬಿಜೆಪಿ ಸಂಸದರ ಕಚೇರಿಯನ್ನು ಧ್ವಂಸಗೊಳಿಸಿ, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಎಂಬಲ್ಲಿ ನಡೆದಿದೆ.
ತೌಸೀಫ್ ಸರೋಜ್, ವಿಶಾಲ್ ಮತ್ತು ಸತ್ಯಂ ಎಂಬುವರೇ ಆರೋಪಿಗಳಾಗಿದ್ದು, ಘಟನೆಯಲ್ಲಿ ಕಂಪ್ಯೂಟರ್ ಆಪರೇಟರ್ ಪ್ರದೀಪ್ ಬಿಂದ್ (27) ಗಾಯಗೊಂಡಿದ್ದಾರೆ. ದಾಳಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕಾರಿನೊಳಗೆ ಪತ್ತೆಯಾಯ್ತು ವ್ಯಕ್ತಿಯ ಮೃತದೇಹ: ಸಾವಿಗೆ ಕಾರಣ ಮಾತ್ರ ನಿಗೂಢ
ಇಲ್ಲಿನ ಥಾನಿಪುರ ಪ್ರದೇಶದಲ್ಲಿರುವ ಸಂಸದರ ಕಛೇರಿಗೆ ಶನಿವಾರದಂದು ನುಗ್ಗಿದ ಆರೋಪಿಗಳು ಪ್ರದೀಪ್ ಜತೆಗೆ ಯಾವುದೋ ವಿಷಯವಾಗಿ ವಾಗ್ವಾದ ನಡೆಸಿದ ಬಳಿಕ ಆತನನ್ನು ಥಳಿಸಿದ್ದು, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ (ಅಪರಾಧ) ವಿನೋದ್ ಯಾದವ್ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು, ಗಾಯಾಳು ಪ್ರದೀಪ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ದಾಳಿಯ ನಂತರ ಸ್ಥಳದಿಂದ ಪರಾರಿಯಾದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇನ್ನು ಘಟನೆಯಲ್ಲಿ ಹಲವಾರು ಕಡತಗಳು ಹಾಗೂ ದಾಖಲೆಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬರಲಿದೆ.(ಏಜೆನ್ಸೀಸ್)