ನ್ಯೂಸ್

ಅಧಿವೇಶನಕ್ಕೆ ಬಿಜೆಪಿ ಎಂಎಲ್‌ಸಿಗಳ ತಾಲೀಮು | Strategy to tie hands of Congress

ಮೃತ್ಯುಂಜಯ ಕಪಗಲ್

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ ಜನಮುಖಿಯಾಗಿ ಕೆಲಸ ಮಾಡಿ, ಸರ್ಕಾರವನ್ನು ಜನಪರ ಕೆಲಸಗಳಿಗೆ ಬಗ್ಗಿಸುವಂತಹ ಒತ್ತಡ ತಂತ್ರಗಾರಿಕೆಯನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯರು ಹೆಣೆದಿದ್ದಾರೆ.

ವಿಧಾನಸೌಧದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೊಠಡಿಯಲ್ಲಿ ಶುಕ್ರವಾರ ಸಭೆ ಸೇರಿದ ಪಕ್ಷದ ಸದಸ್ಯರು, ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು.

ವಿರೋಧಕ್ಕಾಗಿ ವಿರೋಧ, ಟೀಕೆಗಾಗಿ ಟೀಕೆ ಮಾಡುತ್ತಿಲ್ಲ. ರಚನಾತ್ಮಕ ಪ್ರತಿಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ, ರಾಜ್ಯದ ಜನರಿಗೆ ತಲುಪಬೇಕು. ಅದೇ ಕಾಲಕ್ಕೆ ಕಾಂಗ್ರೆಸ್ ಸರ್ಕಾರದ ವೈಲ್ಯ, ಗ್ಯಾರಂಟಿಗಳ ವ್ಯತ್ಯಯ, ಮತ್ತಿತರ ಹುಳುಕುಗಳನ್ನು ದಾಖಲೆ, ಪುರಾವೆ ಸಹಿತ ಮಂಡಿಸುವ ಮೂಲಕ ಜನರ ಮುಂದಿಡಲು ಸಭೆ ನಿರ್ಧರಿಸಿದೆ.

ಗಮನಸೆಳೆಯವ ಸೂಚನೆ, ಮಹತ್ವದ ಚರ್ಚೆ ಸೇರಿ ಕಲಾಪದ ವಿವಿಧ ನಿಯಮಗಳನ್ನು ಪ್ರಸ್ತಾಪಕ್ಕೆ ಅವಕಾಶವಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡಿತು. ಸರ್ಕಾರದ ಅಸಮರ್ಥತೆ ಮೇಲೆ ಬೆಳಕು ಚೆಲ್ಲಲು ಪ್ರಬಲ ಹೋರಾಟ, ಪ್ರಭಾವೀ ನಿಲುವು ಕೈಗೊಳ್ಳಲು ಸಮ್ಮತಿಸಿತು.

ಜನರ ಆಕ್ರೋಶಕ್ಕೆ ಧ್ವನಿ

ರಸ್ತೆ ಗುಂಡಿಗಳನ್ನು ಮುಚ್ಚಲಾಗದು ನಿಸ್ಸಹಾಯಕ ಸ್ಥಿತಿಗೆ ಸರ್ಕಾರ ತಲುಪಿದೆ. ಜನರ ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಸಿಎಂ, ಸಚಿವರ ಜನತಾದರ್ಶನ, ಜಿಲ್ಲಾ ಉಸ್ತುವಾರಿ ಸಚಿವರುಗಳ ಜಿಲ್ಲಾ ಪ್ರವಾಸಗಳು ಮೂಲೆಗುಂಪಾಗಿವೆ.

ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಮರಳುತ್ತಿದ್ದಾರೆ. ಸರ್ಕಾರದ ಕಾರ್ಯವೈಖರಿ ಜನರಲ್ಲಿ ಆಕ್ರೋಶ ಮಡುಗಟ್ಟಿದ್ದು, ಪೂರಕವಾಗಿ ಧ್ವನಿ ಎತ್ತಿ, ಜನಪರವಾಗಿ ಕೆಲಸ ಮಾಡಬೇಕೆಂದು ಸರ್ಕಾರವನ್ನು ಬಗ್ಗಿಸಲು ಸಾಧ್ಯವಾಗುತ್ತದೆ ಎಂಬ ಒಮ್ಮತದ ನಿಲುವು ತಳೆಯಿತು ಎಂದು ತಿಳಿದಿದೆ.