ನ್ಯೂಸ್

ರಸ್ತೆ ಕೆಲಸ ಮಾಡಿಸಿಕೊಡಿ ಎಂದು ಕೇಳಲು ಬಂದ ಪುರಸಭೆ ಸದಸ್ಯೆಯ ಪುತ್ರನಿಗೆ ಶಾಸಕರಿಂದ ಖಡಕ್​ ಎಚ್ಚರಿಕೆ...

ವಿಜಯಪುರ: ಪುರಸಭೆಯ ಕಾಂಗ್ರೆಸ್​ ಸದಸ್ಯೆಯೋರ್ವರ ಮಗನನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.

ಮುದ್ದೇಬಿಹಾಳ ಪಟ್ಟಣದ 10ನೇ ವಾರ್ಡ್​​ನ ರಸ್ತೆ ಅಭಿವೃದ್ಧಿ ಮಾಡಿಸುವಂತೆ ಕೇಳಲು ಆ ವಾರ್ಡ್​ನ ಸದಸ್ಯೆ ಸೋನಾಬಾಯಿ ಅವರ ಪುತ್ರ ಅನಿಲ್​ ನಾಯಕ, ಅಲ್ಲಿನ ಬಿಜೆಪಿ ಶಾಸಕ ಎ.ಎಸ್​.ಪಾಟೀಲ್​ ನಡಹಳ್ಳಿ ಅವರ ನಿವಾಸದ ಬಳಿ ತೆರಳಿದ್ದ.

ಈ ವೇಳೆ ಶಾಸಕರು ಯುವಕನ ಮೇಲೆ ಸಿಟ್ಟಾಗಿ ಮಾತನಾಡಿದ್ದಾರೆ. ನಿಮ್ಮ ಓಣಿಗೆ ಕೆಲಸ ಮಾಡಲು ಬಂದವರ ಮೇಲೆ ನೀನು ಜಗಳ ಮಾಡುತ್ತೀಯಂತೆ. ಏನಂದು ಕೊಂಡಿದ್ದೀಯಾ ನಿನ್ನ ಓಣಿಯನ್ನ. ಕೆಲಸ ಮಾಡಲು ಬಂದ ಗುತ್ತಿಗೆದಾರರ ಮೇಲೆ ನೀನು ಗೂಂಡಾಗಿರಿ, ದಾದಾಗಿರಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನನ್ನು ಆಯ್ಕೆ ಮಾಡಿದ್ದು ಜನರು. ಅವರೇ ಬಂದು ಕೇಳಲಿ. ನೀನು ರಾಜಕೀಯ ಮಾಡಲು ಬರಬೇಡ ಎಂದು ಅನಿಲ್​ಗೆ ಹೇಳಿದ್ದಾರೆ.

ಅನಿಲ್​ ಕೂಡ ಸ್ವಲ್ಪ ಹೊತ್ತು ಶಾಸಕರೊಂದಿಗೆ ವಾಗ್ವಾದ ನಡೆಸಿ, ನಂತರ ಕ್ಷಮೆ ಯಾಚಿಸಿ ಅಲ್ಲಿಂದ ತೆರಳಿದ್ದಾರೆ. (ದಿಗ್ವಿಜಯ ನ್ಯೂಸ್​)