ನ್ಯೂಸ್

ಗೃಹಲಕ್ಷ್ಮಿ ಯೋಜನೆ ಪೂರ್ವಭಾವಿ ತಯಾರಿ ಸಭೆ ನಡೆಸಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ !

ಬೆಂಗಳೂರು: ಬಡ ಕುಟುಂಬದ ಮನೆ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ಭತ್ಯೆ ಪಾವತಿಸುವ ಯೋಜನೆಗೆ ಮೈಸೂರಿನಲ್ಲಿ ಆ.30ರಂದು ಚಾಲನೆ ನೀಡಲು ಸರ್ಕಾರ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಶಾಸಕ ಎಸ್.ಟಿ‌.ಸೋಮಶೇಖರ್ ಅವರು ಸಾಥ್ ನೀಡಿದ್ದಾರೆ. ಯಶವಂತಪುರದಲ್ಲಿರುವ ಪಕ್ಷದ ಶಾಸಕರ ಕಚೇರಿಯಲ್ಲಿ ಸೋಮವಾರ ಪೂರ್ವ ತಯಾರಿ ಸಭೆ ನಡೆಸಿದರು !.

ಕ್ಷೇತ್ರದಲ್ಲಿ ಭತ್ಯೆಗೆ ಅರ್ಹರಾದ ಯಾರೊಬ್ಬರೂ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಪಂಚಾಯಿತಿ ಮಾಜಿ ಸದಸ್ಯರು, ಕ್ಷೇತ್ರದ ಮುಖಂಡರಿಗೆ ಸಲಹೆ ನೀಡಿದರು. ಸಭೆ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಭೆ ನಡೆಸಿದ್ದನ್ನು ಸಮರ್ಥಿಸಿಕೊಂಡರು.

ಇಲಾಖೆ ಅಧಿಕಾರಿಗಳು ವಾರದ ಹಿಂದೆ ನನ್ನನ್ನು ಭೇಟಿ ಮಾಡಿ, ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಬರಬೇಕು ಎಂದು ಆಹ್ವಾನಿಸಿದರು. ಇದೇ ವೇಳೆ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ನಮ್ಮ ಕ್ಷೇತ್ರದ 62 ಸಾವಿರ ಬಿಪಿಎಲ್ ಕಾರ್ಡ್ ದಾರರಿ ಯೋಜನೆಯ ಲಾಭ ಕೊಡಿಸಲು ಈ ಸಭೆ ಮಾಡಿದ್ದೇನೆ.

ಇದರ ಜತೆಗೆ ಗೃಹಜ್ಯೋತಿ ಯೋಜನೆಯಲ್ಲಿ ನಮ್ಮ ಕ್ಷೇತ್ರದಲ್ಲಿ 1.97 ಲಕ್ಷ ಫಲಾನುಭವಿಗಳಿದ್ದಾರೆ. ಪಂಚಾಯಿತಿ ಎಲ್ಲ ಸದಸ್ಯರನ್ನೂ ಕರೆದು ಮಾಹಿತಿ ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರದ ಫಲ ಜನಸಾಮಾನ್ಯರಿಗೆ ಸಿಗದಂತಾಗಬಾರದು. ಈ‌ ಕಾರಣಕ್ಕೆ ಸಭೆ ನಡೆಸಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ತಲೆ ಕೆಡಿಸಿಕೊಳ್ಳಲ್ಲ

ಈ ಸಭೆ ಬಿಜೆಪಿಗೆ ಮುಜುಗರ ತರುವದಿಲ್ಲವೆ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಯೋಜನೆ ಯಾಕೆ ಕೊಡುತ್ತಿಲ್ಲವೇಕೆ ? ಎಂದು ಸಾರ್ವಜನಿಕರು ಕೇಳಬಹುದು. ಆಗ ನಾನು ಬಿಜೆಪಿ ಶಾಸಕನೆಂದಯ ಹೇಳಲಾಗುವುದಿಲ್ಲ. ಜವಾಬ್ದಾರಿಯಯತ ಶಾಸಕರಾಗಿ ನಾನು ಸರ್ಕಾರದ ಯೋಜನೆ ಜನರಿಗೆ ತಲುಪಿಸಲೇಬೇಕು. ಯಾರೇನೇ ಕಾಮೆಂಟ್ಸ್ ಮಾಡಿದರೂ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.

ಶಾಸಕರಾಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಅವರು ಏನೋ ಅಂತಾರೆ, ಇವರು ಯಾರೋ ಅಂತಾರೆ ಎಂದು ನೋಡುವುದಿಲ್ಲ. ಚುನಾಯಿಸಿದ ಕ್ಷೇತ್ರದ ಜನರ ಸೇವೆ ನನಗೆ ಮುಖ್ಯವೆಂದು ಎಸ್.ಟಿ.ಸೋಮೇಖರ್ ಸಮರ್ಥಿಸಿಕೊಂಡರು.

ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತಾಡಿಲ್ಲ. ಸಿಎಂ ಜತೆಗೂ ರಾಜಕೀಯ ಮಾತಾಡಿಲ್ಲ. ಕಾಂಗ್ರೆಸ್ ಗೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಎಲ್ಲ‌ ಕ್ಷೇತ್ರಗಳಿಂದಲೂ ಹೋಗಿದ್ದಾರೆ. ಯಾರು ಜಿ.ಪಂ, ತಾ.ಪಂ, ಬಿಬಿಎಂಪಿಗೆ ಸ್ಪರ್ಧೆ ಮಾಡಬೇಕು ಎಂದು ಬಯಸಿದ್ದಾರೋ ಅಂತಹವರು ಕಾಂಗ್ರೆಸ್ ಗೆ ಹೋಗಿದ್ದಾರೆ.

ಯಾರು ಶಾಸಕರ ಜತೆ ಇರಬೇಕು ಎಂದುಕೊಂಡಿದ್ದಾರೋ ಅವರು ನನ್ನ ಜತೆಯೇ ಇದ್ದಾರೆ. ನನ್ನ ಜತೆಗೆ 85 ಮುಖಂಡರು ಉಳಿದುಕೊಂಡಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.