ನ್ಯೂಸ್

ಸಿದ್ದರಾಮಯ್ಯ ಮಂಡಿಸಿದ್ದು ಪಾಕಿಸ್ತಾನದ ಬಜೆಟ್ಟಾ ಅಥವಾ ಕರ್ನಾಟಕದ ಬಜೆಟ್ಟಾ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ

ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದು, ಕಾಂಗ್ರೆಸ್ಸಿಗರು ಈ ಸಾಲಿನ ಬಜೆಟ್​ಅನ್ನು ಹಾಡಿಹೊಗಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕುರಿತು ಮಾತನಾಡಿರುವ ವಿಪಕ್ಷ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಇದು ಪಾಕಿಸ್ತಾನದ ಬಜೆಟ್​ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ಮಂಡನೆ ಬಳಿಕ ಮಾತನಾಡಿದ ಶಾಸಕ ಯತ್ನಾಳ್​, ಸಿಎಂ ಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್​ ಪಾಕಿಸ್ತಾನದ ಬಜೆಟ್ಟಾ ಅಥವಾ ಕರ್ನಾಟಕದ ಬಜೆಟ್ಟಾ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆರ್ಥಿಕ ಸಚಿವರಾಗಿ ಅತಿ ಹೆಚ್ಚು ಭಾರೀ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ಧಾರೆ. ಆದರೆ, ಈ ಬಜೆಟ್​ಅನ್ನು ನೋಡಿದಾಗ ಇದು ಕರ್ನಾಟಕದ ಬಜೆಟ್ಟಾ ಅಥವಾ ಪಾಕಿಸ್ತಾನದ ಬಜೆಟ್ಟಾ ಎಂಬ ಸಂಶಯ ಮೂಡುತ್ತಿದೆ. ಇದು ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬದಲಾಗಿ ಜಮೀರ್ ಅವರ ಬಜೆಟ್ ಆಗಿದೆ. ಕೋಮುಗಲಭೆ ಎಬ್ಬಿಸುವ ಬಜೆಟ್ ಇದಾಗಿದೆ. ನೀರಾವರಿಗೆ ಎಷ್ಟು ಹಣ ಎಂದು ಹೇಳಿಲ್ಲ, ಕೇವಲ ಗ್ಯಾರಂಟಿ ಸಲುವಾಗಿ 1.16 ಲಕ್ಷ ಕೋಟಿ ಸಾಲ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರಿಗೆ ಬಜೆಟ್​​ನಲ್ಲಿ ಸಾಕಷ್ಟು ಕೊಡುಗೆ ಕೊಡಲಾಗಿದೆ. ಆದರೆ ದಲಿತರಿಗೆ ಏನೂ ಇಲ್ಲ. ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಒಂದು ಗಂಟೆಯಲ್ಲಿ ಮಂಡನೆ ಆಗಿದೆ. ಆದರೆ ಸಿದ್ದರಾಮಯ್ಯ ಬಜೆಟ್ 3.30 ತಾಸುಗಳ ಕಾಲ ಮಂಡನೆ ಮಾಡಲಾಗಿದೆ. ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಏನಿಲ್ಲ.‌ ಬಯಲು ಸೀಮೆ ಕಡೆಗೆ 25 ಕೋಟಿ ಕೊಡಲಾಗಿದೆ. ವಕ್ಫ್ ಗೆ 125 ಕೋಟಿ ಕೊಡಲಾಗಿದೆ. ಸಿದ್ದರಾಮಯ್ಯ ಅವರ ನಿರ್ಗಮನದ ಬಜೆಟ್ ಇದಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.