ನ್ಯೂಸ್

ಮಹಾರಾಷ್ಟ್ರ ಸಿಎಂ ಮತ್ತು ಅವರ ಪುತ್ರನ ವಿರುದ್ಧ ಟ್ವೀಟ್​ ಮಾಡಿದ್ದ ಬಿಜೆಪಿ ಕಾರ್ಯಕರ್ತನ ಮರುಬಂಧನ

ನಾಗಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತನನ್ನು ಮತ್ತೆ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಬಿಜೆಪಿಯ ಐಟಿ ಸೆಲ್​ನ ಸದಸ್ಯ ಸಮೀತ್ ಥಾಕ್ಕರ್ ಎಂದು ಗುರುತಿಸಲಾಗಿದೆ.ಕಳೆದ ತಿಂಗಳು ಈ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಸಮೀತ್ ಥಾಕ್ಕರ್ ಅವರನ್ನು ಈ ಹಿಂದೆಯೇ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಕೋರ್ಟ್​ಗೆ ಹಾಜರುಪಡಿಸಿದ್ದ ವೇಳೆ ಅಕ್ಟೋಬರ್ 5ರಂದು ಮುಂಬೈನ ವಿಪಿ ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಲ್ಲದೆ, ಮೊಬೈಲ್ ಮತ್ತು ಲ್ಯಾಪ್​ಟಾಪ್ ಅನ್ನು ಪೊಲೀಸರಿಗೆ ಹಸ್ತಾಂತರಿಸುವಂತೆಯೂ ಕೋರ್ಟ್ ಸೂಚಿಸಿತ್ತು.

ಆದರೆ, ಥಾಕ್ಕರ್ ಪೊಲೀಸ್ ಠಾಣೆಗೆ ಹಾಜರಾಗಿಲ್ಲ.ಮೊಬೈಲ್ ಮತ್ತು ಲ್ಯಾಪ್​ಟಾಪ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿಲ್ಲ. ಹೀಗಾಗಿ ಮತ್ತೆ ಅವರನ್ನು ಬಂಧಿಸಬೇಕಾಗಿ ಬಂದಿದೆ. ಸ್ಥಳೀಯ ಶಿವಸೇನೆ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)