ಸಾಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಮೈತ್ರಿ ಪಾಟೀಲ್, ಸವಿತಾ ವಾಸು, ಎಚ್.ಎಸ್.ರಮೇಶ್, ರಾಧಿಕಾ ಪೈ, ಹು.ಭಾ.ಅಶೋಕ್ ಇತರರಿದ್ದರು. 
ನ್ಯೂಸ್

ಸಂಘಟನಾತ್ಮಕ ಹೋರಾಟಕ್ಕೆ ಪ್ರತಿಫಲ

ಜಿ. ಗಜೇಂದ್ರ

ಸಾಗರ: ನಗರದ ಹೋಟೆಲ್ ವೃತ್ತದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ವಿಜಯೋತ್ಸವದಲ್ಲಿ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಕಳೆದ ಐದು ವರ್ಷದಿಂದ ಬಿ.ವೈ.ರಾಘವೇಂದ್ರ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು, ಎಲ್ಲ ಜಾತಿ, ಧರ್ಮಗಳ ಜತೆಗೆ ಹೊಂದಿದ್ದ ಉತ್ತಮ ಬಾಂಧವ್ಯದಿಂದ ಭಾರಿ ಅಂತರದಿಂದ ಜಯಗಳಿಸಿದ್ದಾರೆ. ಸಂಸದರಾಗಿ ದೇಶದಲ್ಲಿಯೆ ಅತ್ಯುತ್ತಮ ಕೆಲಸ ಮಾಡಿರುವ ಹೆಗ್ಗಳಿಕೆ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದ್ದರೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತ ನಡೆಸಲಿದೆ. ಪಕ್ಷದ ಪ್ರಮುಖರು ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ನಡುವೆಯೂ ನಮ್ಮ ಸಂಸದರು ಅತಿಹೆಚ್ಚು ಮತ ಪಡೆದು ಮತ್ತೊಮ್ಮೆ ಸಂಸತ್ ಪ್ರವೇಶ ಮಾಡಿದ್ದಾರೆ ಎಂದರು
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ವತ್ತು ಮಾಜಿ ಸಚಿವ ಹರತಾಳು ಹಾಲಪ್ಪ ಹಿಂದಿನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಸುಮಾರು 20 ಸಾವಿರಕ್ಕೂ ಹೆಚ್ಚಿನ ಲೀಡ್ ನಮ್ಮ ಕ್ಷೇತ್ರದಲ್ಲಿ ನೀಡಿದ್ದಾರೆ. ಬಿ.ವೈ.ರಾಘವೇಂದ್ರ ಸಂಸದರಾಗಿ ಇನ್ನಷ್ಟು ಉತ್ತಮ ಕೆಲಸ ಮಾಡುತ್ತಾರೆ ಎನ್ನುವ ಅಭಿಮಾನದಿಂದ ಮತದಾರರು ಅವರನ್ನು ಗೆಲ್ಲಿಸಿದ್ದಾರೆ ಎಂದರು.
ನಗರಸಭಾ ಸದಸ್ಯೆ ಮೈತ್ರಿ ಪಾಟೀಲ್, ಸವಿತಾ ವಾಸು, ಎಚ್.ಎಸ್.ರಮೇಶ್, ರಾಧಿಕಾ ಪೈ, ಹು.ಭಾ.ಅಶೋಕ್, ಸಂತೋಷ್ ಶೇಟ್, ಸತೀಶ್, ರಾಜು ಬಿ. ಮಡಿವಾಳ, ಮಹೇಶ್ ಇತರರಿದ್ದರು.