ಹುಬ್ಬಳ್ಳಿ: ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜನ ಗುಂಪು ಸೇರದಂತೆ, ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೆ, ಈ ನಿಯಮವನ್ನು ಆರೋಗ್ಯ ಸಚಿವರ ಆಪ್ತನೊಬ್ಬ ಉಲ್ಲಂಘಿಸಿದ್ದು, ಗುಂಡು-ತುಂಡಿನ ಭರ್ಜರಿ ಪಾರ್ಟಿ ಮಾಡಿದ್ದಾರೆ.
ಬಿಜೆಪಿ ಸ್ಥಳೀಯ ಮುಖಂಡ ಎಚ್.ಎಸ್. ಶಿವನಗೌಡ ಶುಕ್ರವಾರ ರಾತ್ರಿ ಗುಂಡು-ತುಂಡಿನ ಪಾರ್ಟಿ ಆಯೋಜಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಿ.ಶ್ರೀರಾಮುಲು ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಿವನಗೌಡ, ಗದಗ ತಾಲೂಕಿನ ಶ್ರೀನಿವಾಸ ಗಾರ್ಡನ್ನಲ್ಲಿ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿರಿ ಮಂಗಳವಾರ ರಾತ್ರಿಯಿಂದಲೇ ಲಾಕ್ಡೌನ್ ಜಾರಿ
ಶಿವನಗೌಡರ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಜನರು ಮಾಸ್ಕ್ ಧರಿಸದೆ, ಪರಸ್ಪರ ಅಂತರವನ್ನೂ ಪಾಲಿಸದೆ ''ಎಣ್ಣೆ'' ನಶೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸಾಮಾಜಿಕ ಅಂತರ ಮರೆತು ಪಾರ್ಟಿಯಲ್ಲಿ ಇನ್ನೂರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಕರೊನಾ ಸಂಕಷ್ಟ ಸಂದರ್ಭದಲ್ಲಿ ಪಾರ್ಟಿ ಬೇಕಿತ್ತಾ? ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
'ಕಾರ್ಯಕ್ರಮ ಆಯೋಜಿಸಿದ್ದು ನಾನಲ್ಲ, ಸ್ನೇಹಿತರು ಏರ್ಪಡಿಸಿದ್ದರು. ಅಲ್ಲಿಗೆ ನಾನು ಹೋಗಿದ್ದೆ. ಜು.4 ನನ್ನ ಜನ್ಮದಿನ' ಎಂದು ಶಿವನಗೌಡ ಸ್ಪಷ್ಟನೆ ನೀಡಿದ್ದಾರೆ.