ನ್ಯೂಸ್

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿಗೆ ಬಿಟ್ಟ ಬಿಜೆಪಿ;  ದೆಹಲಿ ವರಿಷ್ಠರ ಜತೆ ಚರ್ಚಿಸಿ ನಿರ್ಧಾರ

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಕ್ಷಣ ಗಣನೆ ಶುರುವಾಗಿದೆ. ಬಿಜೆಪಿ ಈಗಾಗಲೇ ಎರಡು ಕ್ಷೇತ್ರಗಳಿಗೆ ಟಿಕೆಟ್ ೋಷಿಸಿದೆ.

ಆದರೆ, ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಅಭ್ಯರ್ಥಿ ಅಂತಿಮಗೊಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆದರೂ ಸ್ಪಷ್ಟ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಭಾನುವಾರ ದೆಹಲಿಯಲ್ಲಿ ವರಿಷ್ಠರ ಜತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.

ಈ ಮಹತ್ವದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಮಲ್ಲೇಶ್ ಬಾಬು ಭಾಗಿಯಾಗಿದ್ದರು. ಆದರೆ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಈ ಸಭೆಯಿಂದ ದೂರ ಉಳಿದಿದ್ದರು.

ಯೋಗೇಶ್ವರ್ ಮನವೊಲಿಕೆ ಜವಾಬ್ದಾರಿಯನ್ನು ಬಿಜೆಪಿ ನಾಯಕರಿಗೆ ವಹಿಸಲು ಕುಮಾರಸ್ವಾಮಿ ಯತ್ನ ನಡೆಸಿದರು. ಯೋಗೇಶ್ವರ್ ಬಂಡಾಯವೆದ್ದರೆ ಮೈತ್ರಿಗೆ ಧಕ್ಕೆಯಾಗಲಿದೆ. ಹೀಗಾಗಿ ಜೆಡಿಎಸ್ ಬೆಂಬಲಿಸುವ ಕುರಿತು ಮನವೊಲಿಸುವಂತೆ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಿದರು.

ಈ ಮಧ್ಯೆ ವಿಜಯೇಂದ್ರ ಹಾಗೂ ಅಶೋಕ್ ಅವರು ಸಿ.ಪಿ.ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡಿದರು. ಕ್ಷೇತ್ರದ ಸದ್ಯದ ಪರಿಸ್ಥಿತಿಯ ರಿಪೋರ್ಟ್ ಪ್ರಸ್ತಾಪಿಸಿ ಯೋಗೇಶ್ವರ್‌ಗೆ ಟಿಕೆಟ್ ಕೊಡುವುದು ಸೂಕ್ತ ಎಂಬ ನಿಲುವು ವ್ಯಕ್ತಪಡಿಸಿದರು.

ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಗೆಲುವಿಗೆ ಸಿ.ಪಿ.ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರ ಸ್ಪರ್ಧೆ ಸರಿ ಎಂದು ಬಿಜೆಪಿ ನಾಯಕರು ವಾದ ಮಂಡನೆ ಮಾಡಿದರು. ಆದರೆ ಅದಕ್ಕೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ.

‘ಕಳೆದ ಬಾರಿ ಲೋಕಸಭಾ ಚುನಾವಣೆಗೆ ಅವರನ್ನೇ ನಿಲ್ಲಿ ಎಂದು ಹೇಳಿದ್ದೆ. ಈಗ ನಮ್ಮ ಕ್ಷೇತ್ರ ಬಿಟ್ಟುಕೊಡಿ ಎಂದರೆ ಹೇಗೆ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹೀಗಾಗಿ ದೋಸ್ತಿ ನಾಯಕರಲ್ಲಿ ಸ್ಪಷ್ಟ ಒಮ್ಮತ ಮೂಡಲಿಲ್ಲ. ಕಾರಣ ಟಿಕೆಟ್ ಹಂಚಿಕೆಯನ್ನು ಹೈಕಮಾಂಡ್‌ಗೆ ಬಿಡಲು ತೀರ್ಮಾನ ಮಾಡಲಾಯಿತಲ್ಲದೆ, ಭಾನುವಾರ ಅಥವಾ ಸೋಮವಾರ ದೆಹಲಿ ಬಿಜೆಪಿ ವರಿಷ್ಠರ ಜತೆ ಚರ್ಚಿಸಿ ಅಂತಿಮವಾಗಿ ಅಭ್ಯರ್ಥಿ ಹೆಸರು ಪ್ರಕಟಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಮೂರನೇಯವರಿಗೆ ಲಾಭ ಬೇಡ..

ದೋಸ್ತಿ ಪಕ್ಷದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಂಡಾಯ ಏಳದಂತೆ ಎಚ್ಚರವಹಿಸಬೇಕು. ಇಬ್ಬರ ಜಗಳ ಮೂರನೇ(ಕಾಂಗ್ರೆಸ್)ಯವರಿಗೆ ಲಾಭವಾಗದಂತೆ ನೋಡಿಕೊಳ್ಳಬೇಕು ಎಂಬ ನಿಲುವಿಗೆ ಉಭಯ ಪಕ್ಷಗಳ ನಾಯಕರೂ ಒಪ್ಪಿಕೊಂಡರು. ದೆಹಲಿ ಬಿಜೆಪಿ ಹೈಕಮಾಂಡ್ ಮೂಲಕ ಸಿ.ಪಿ.ಯೋಗೇಶ್ವರ್ ಮನವೊಲಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.