ನ್ಯೂಸ್

ಕೆಪಿಎಸ್‌ಸಿ ಮರು ಪರೀಕ್ಷೆಗೆ ಬಿಜೆಪಿ ನಾಯಕರ ಒತ್ತಾಯ | Congress party danger to the country

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಲೋಪದೋಷಗಳಿರುವುದು ಹೈಕೋರ್ಟ್ ತೀರ್ಪಿನಿಂದ ಸಾಬೀತಾಗಿದ್ದು, ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಪ್ರತ್ಯೇಕವಾಗಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪಿನಂತೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಅಧಿವೇಶನದಲ್ಲಿ ವಾಗ್ದಾನ ನೀಡಿದ್ದರು. ಹೈಕೋರ್ಟ್‌ಗೆ ಮೊರೆ ಹೋಗಿದ್ದ 32 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆದೇಶ ಹೊರಬಿದ್ದಿದ್ದು, ಈ ತೀರ್ಪಿನ ಪ್ರಕಾರ ಲೋಪದೋಷ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೊಟ್ಟು ಮಾತಿನಂತೆ ಮರು ಪರೀಕ್ಷೆಗೆ ಆದೇಶಿಸುವ ವಿಶ್ವಾಸವಿದೆ. ಕೆಪಿಎಸ್‌ಸಿಯ 70 ಸಾವಿರ ಅಭ್ಯರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಮರು ಪರೀಕ್ಷೆ ಗೊತ್ತುಪಡಿಸಬೇಕು ಎಂದು ಆಗ್ರಹಿಸಿದರು.

ದೇಶಕ್ಕೆ ಕಾಂಗ್ರೆಸ್ ಗಂಡಾಂತರ

ಕಾಶ್ಮೀರದ ಪಹೆಲ್ಗಾಮ್‌ನಲ್ಲಿ ಪ್ರವಾಸಿಗರಿಗೆ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ದೇಶದ ಜನ ಒಕ್ಕೊರಲಿನಿಂದ ಖಂಡಿಸಿ, ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.

ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಹೇಳುವುದೊಂದು, ಸಾರ್ವಜನಿಕವಾಗಿ ಮತ್ತೊಂದು ಹೇಳಿಕೆ ನೀಡುವ ಕಾಂಗ್ರೆಸ್‌ನವರಿಗೆ ಮಾನವೀಯತೆಗಿಂತ ವೋಟ್ ಬ್ಯಾಂಕ್ ಮುಖ್ಯವಾಗಿದೆ ಎಂದು ಟೀಕಿಸಿದರು.

ಹಿಂದು ಅಂತ ಹೇಳಿ ಸಾಯಿಸಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರು ಹೋಗಿ ನೋಡಿದ್ದರೆ, ಅಲ್ಲಿಗೆ ಹೋಗಿ ಬಂದವರೇ ಈ ಮಾತು ಹೇಳಿದ್ದಲ್ಲವೆ ? ಎಂದು ಕೇಳಿದರು.

ಇನ್ನು ಸ್ವಲ್ಪ ದಿನ ಕಳೆದರೆ ಅಲ್ಲಿ ಗುಂಡಿನ ದಾಳಿಗೆ ಯಾರೂ ಬಲಿಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾನು ಪ್ರಿಯಾಂಕ್ ಖರ್ಗೆ ಹೇಳಬಹುದು. ದೇಶಕ್ಕೆ ಬೇರೆಯವರಿಗಿಂತ ಕಾಂಗ್ರೆಸ್ ಹೆಚ್ಚು ಗಂಡಾಂತರವೆಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.