ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮಾಡಿ ಗ್ಯಾರಂಟಿಗಳನ್ನು ಕೊಟ್ಡಿದ್ದಾರೆ. ರಾಜ್ಯದ ಮೇಲೆ ಮತ್ತಷ್ಟು ಸಾಲ ಹೊರಿಸಿದ ಸಾಲದ ಬಜೆಟ್ ಬರೀ ಓಳು ಎಂದು ವಿಧಾನ ಪರಿಷತ್ ಕಲಾಪ ಮುಂದೂಡಿದ ಬಳಿಕ ಪ್ರತಿಪಕ್ಷ ಬಿಜೆಪಿ ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆಗಳನ್ನು ಶುಕ್ರವಾರ ಮೊಳಗಿಸಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ನೇ ಸಾಲಿನ ಆಯವ್ಯಯವನ್ನು ವಿಧಾನ ಪರಿಷತ್ನಲ್ಲಿ ಸದನ ಸೇರುತ್ತಿದ್ದಂತೆಯೇ ಸಭಾನಾಯಕ ಎನ್.ಎಸ್.ಬೋಸರಾಜು ಮಂಡಿಸಿದರು. ಈ ವೇಳೆ ಕಾಂಗ್ರೆಸ್ ನವರಿಗೆ ಮಾತ್ರ ಬ್ಯಾಗ್, ಪ್ರತಿಪಕ್ಷದವರಿಗೆ ಇಲ್ಲವೆ? ಎಂದು ಬಿಜೆಪಿ ಸದಸ್ಯರು ಕಾಲೆಳೆದರು.
ನಂತರ ಮಾತನಾಡಲು ಪ್ರತಿಪಕ್ಷ ಮುಖ್ಯ ಸಚೇತಕ ರವಿಕುಮಾರ್ ಮುಂದಾಗುತ್ತಿದ್ದಂತೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.
ಸದನ ಮುಂದೂಡಿಕೆಯಾಗುತ್ತಿದ್ದಂತೆ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.ಬಜೆಟ್ ಬರೀ ಓಳು, ಸುಳ್ಳಿನ ಬಜೆಟ್ ಎಂದು ಬಿಜೆಪಿ ಸದಸ್ಯರು ಟೀಕಿಸಿದರು.
ಖಾಲಿ ಖಾಲಿ ಖಜಾನೆ ಖಾಲಿ. ಇದು ಸುಳ್ಳಿನ ಬಜೆಟ್ ಎಂದು ಟೀಕೆ ಮಾಡಿದರು. ಸಿದ್ದರಾಮಯ್ಯ ಬಜೆಟ್ ಬರೀ ಓಳು ಎನ್ನುತ್ತಾ, ಭಾರತ್ ಮಾತಾಕಿ ಜೈ, ಪ್ರಧಾನಿ ಮೋದಿಗೆ ಜೈ, ಜೈ ಶ್ರೀರಾಮ್ ಎನ್ನುವ ಘೋಷಣೆ ಮೊಳಗಿಸಿದರು.
ರೈತರಿಗೆ ಪರಿಹಾರ ಕೊಡದ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ ಎನ್ನುವ ಘೋಷಣೆ ಹಾಕಿದ ಬಿಜೆಪಿ ಸದಸ್ಯರು ಬರ ಪರಿಹಾರ ಕೊಡದ ಸಿಎಂ, ಬರೀ ಭಾಷಣ ಮಾಡುತ್ತಿರುವ ಓಳು ಸಿದ್ದರಾಮಯ್ಯ, ಬಜೆಟ್ ಓಳು ಓಳು ಬರೀ ಓಳು ಎನ್ನುತ್ತಾ ಸದನ ಸಭಾಂಗಣದಿಂದ ನಿರ್ಗಮಿಸಿದರು.