ನ್ಯೂಸ್

ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ!

ಹಾಸನ: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧಿತರಾಗಿದ್ದ ಹಾಸನದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್​ ಸಿದ್ದರಾಮ.ಎಸ್‌ ಆದೇಶ ಹೊರಡಿಸಿದ್ದಾರೆ.

ದೇವರಾಜೇಗೌಡ ಅವರನ್ನು ನಿನ್ನೆ ಚಿತ್ರದುರ್ಗದ ಹಿರಿಯೂರು ಬಳಿ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಹೊಳೆನರಸೀಪುರ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಈ ವೇಳೆ ಲೈಂಗಿಕ ದೌರ್ಜನ್ಯದ ಕೇಸ್‌ನಲ್ಲಿ ಅವರನ್ನು ಪೊಲೀಸರು ಬಂಧಿಸಿ, ಹೊಳೆನರಸೀಪುರ ಪಟ್ಟಣದ ಅರಕಲಗೂಡು ರಸ್ತೆಯಲ್ಲಿರೋ ನ್ಯಾಯಾಧೀಶರ ಮನೆಯಲ್ಲಿ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇವರಾಜೇಗೌಡರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದು, ಬಳಿಕ ಎಸ್‌ಐ ಅರುಣ್ ನೇತೃತ್ವದಲ್ಲಿ ಹಾಸನ ಪೊಲೀಸರು ದೇವರಾಜೇಗೌಡರನ್ನು ಹೊಳೆನರಸೀಪುರಕ್ಕೆ ಕರೆದೊಯ್ದಿದ್ದರು.

ಅರಕಲಗೂಡು, ಹಳ್ಳಿಮೈಸೂರು ಹಾಗೂ ಬಾಣಾವರ ಪಿಎಸ್‌ಐಗಳು ದೇವರಾಜೇಗೌಡರನ್ನು ಕರೆತಂದು ಹೊಳೆನರಸೀಪುರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇರಿಸಿದ್ದರು. ಸತತ ವಿಚಾರಣೆಯ ಬಳಿಕ ಪೊಲೀಸ್ ಅಧಿಕಾರಿಗಳು ಮೆಡಿಕಲ್‌ ಟೆಸ್ಟ್‌ಗೆ ಕರೆದೊಯ್ದಿದ್ದಾರೆ. ತದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.