ಎಚ್.ಡಿ.ಕುಮಾರಸ್ವಾಮಿ  
ನ್ಯೂಸ್

ಹೈಕಮಾಂಡ್ ಜೊತೆಯಲ್ಲಿ ಎಚ್ಡಿಕೆ ವಿಶ್ವಾಸದ ಹೆಜ್ಜೆ; ಕಾರ್ಯಕರ್ತರ ಪಡೆಗೆ ಉತ್ಸಾಹ ತುಂಬಲು ಯತ್ನ

Bengaluru - Political - Shivananda Tagadur

ಬೆಂಗಳೂರು:
ಬಿಜೆಪಿ ಹೈಕಮಾಂಡ್ ಜೊತೆಯಲ್ಲಿ ಸಮನ್ವಯತೆ ಸಾಧಿಸುವಲ್ಲಿ ವಿಶ್ವಾಸದ ಹೆಜ್ಜೆ ಇಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾರ್ಯಕರ್ತರಲ್ಲೂ ಹೊಸ ವಿಶ್ವಾಸ ತುಂಬಲು ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜಕೀಯ ಚಟುವಟಿಕೆ ತೀವ್ರಗೊಳಿಸಿರುವ ಎಚ್ಡಿಕೆ, ತಳಮಟ್ಟದ ಕಾರ್ಯಕರ್ತರ ಪಡೆಯಲ್ಲಿ ಮತ್ತು ಮುಖಂಡರಲ್ಲಿ ರಾಜಕೀಯ ಅನಿವಾರ್ಯತೆ ಹೆಜ್ಜೆಯ ಬಗ್ಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ.
ಪ್ರಾದೇಶಕ ಪಕ್ಷ ಜೆಡಿಎಸ್ ಮುಗಿಸುವ ನಿಟ್ಟಿನಲ್ಲಿಯೇ ಹೆಜ್ಜೆ ಇಟ್ಟ ಸಂದರ್ಭದಲ್ಲಿ ನಮಗೆ ಬಿಜೆಪಿ ಮೈತ್ರಿ ಅನಿವಾರ್ಯವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆಯಲ್ಲಿ ಸ್ಪರ್ಧೆ ಮಾಡಿದರೆ ಮುಂದೆ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ವರಿಷ್ಠ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ವಿಶ್ವಾಸಪೂರ್ವಕವಾಗಿ ನಡೆದುಕೊಂಡಿದ್ದಾರೆ. ಈ ವಿಶ್ವಾಸವನ್ನು ನಾವು ಕಾರ್ಯಕರ್ತರು ಮತ್ತು ಮುಖಂಡರ ಹಂತಕ್ಕೂ ತೆಗೆದುಕೊಂಡು ಹೋಗಲು ರೂಪುರೇಷ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೈಕಮಾಂಡ್ ಹಂತದಿಂದ ತಳಮಟ್ಟದಲ್ಲಿರುವ ಕಾರ್ಯಕರ್ತರ ತನಕ ಹೊಸ ವಿಶ್ವಾಸವನ್ನು ತುಂಬುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನ ಮೇರೆಗೆ ಎಚ್ಡಿಕೆ ಆಗಿಂದಾಗ್ಗೆ ಹೈಕಮಾಂಡ್ ಭೇಟಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆಪ್ತ ಮೂಲಗಳು ತಿಳಿಸಿವೆ.