ನ್ಯೂಸ್

ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ: ವಿಜಯೇಂದ್ರ | Joint strategy plan

ಮೃತ್ಯುಂಜಯ ಕಪಗಲ್

ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣಾ ವ್ಯೆಹ, ಕಾಂಗ್ರೆಸ್ ಸರ್ಕಾರದ ವೈಲ್ಯಗಳ ವಿರುದ್ಧ ಹೋರಾಡಲು ದೋಸ್ತಿ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಬಿಜೆಪಿ-ಜೆಡಿಎಸ್ ಸಂಕಲ್ಪ ಮಾಡಿವೆ.

ದೀಪಾವಳಿ ಹಬ್ಬದ ನಿಮಿತ್ತ ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ನಾಯಕರು ಮಂಗಳವಾರ ಭೇಟಿ ಮಾಡಿ ಶುಭ ಹಾರೈಸಿದರು.

ನಂತರ ರಾಜ್ಯ ರಾಜಕೀಯ ವಿದ್ಯಮಾನ, ಉಭಯ ಪಕ್ಷಗಳು ಮುಂದಿನ ಹೆಜ್ಜೆಗಳು ಕುರಿತು ಚರ್ಚಿಸಿ ರಾಜ್ಯಮಟ್ಟ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಎರಡು ಪ್ರತ್ಯೇಕ ಸಮನ್ವಯ ಸಮಿತಿಗಳ ರಚನೆಗೆ ತೀರ್ಮಾನಿಸಿದರು.

ಪರಸ್ಪರ ವಿಶ್ವಾಸ ವೃದ್ಧಿಸಿಕೊಂಡು, ಸಮನ್ವಯದಿಂದ ಉಭಯ ಪಕ್ಷಗಳ ನಾಯಕರು ದೀಪಾವಳಿ ಹಬ್ಬದ ಪರಸ್ಪರ ಶುಭ ಹಾರೈಕೆಯನ್ನು ವೇದಿಕೆಯಾಗಿ ಮಾಡಿಕೊಂಡರು.

ಗ್ಯಾರಂಟಿ ಹೆಸರಿನಲ್ಲಿ ದೂರಗಾಮಿ ಯೋಜನೆ ಜಾರಿಯಾಗಿಲ್ಲ, ಅಭಿವೃದ್ಧಿ ಕೆಲಸಗಳಿಲ್ಲ, ಸಂಕಷ್ಟಕ್ಕೂ ತಕ್ಷಣ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ರೋಸಿ ಹೋಗಿದ್ದಾರೆ.

ಸರ್ಕಾರದ ಕಿವಿ ಹಿಂಡಿ ಜನರಿಗೆ ಧ್ವನಿಯಾಗುವ ಜತೆಗೆ ಸಂಘಟನೆಯಲ್ಲಿ ಹುರುಪು, ಉಭಯ ಪಕ್ಷಗಳ ಕಾರ್ಯಕರ್ತರನ್ನು ಬೆಸೆಯಲು ಆಗಾಗ್ಗೆ ಭೇಟಿ, ಮಾತುಕತೆ ನಡೆಸಲು ಎರಡೂ ಪಕ್ಷಗಳ ನಾಯಕರು ತಾತ್ವಿಕವಾಗಿ ಸಮ್ಮತಿಸಿದ್ದಾರೆ.

ನಿರ್ಧಾರ ಪ್ರಕಟ

ಎಚ್.ಡಿ.ಕುಮಾರಸ್ವಾಮಿ ಭೇಟಿ ನಂತರ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯಮಟ್ಟ ಹಾಗೂ ಜಿಬಿಎಗೆ ಪ್ರತ್ಯೇಕವಾಗಿ ಎರಡು ಸಮನ್ವಯ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಕುಮಾರಸ್ವಾಮಿಯವರು ತಮ್ಮ ಪಕ್ಷದ ಪಟ್ಟಿ ಕಳುಹಿಸಲಿದ್ದಾರೆ ಎಂದು ಪ್ರಕಟಿಸಿದರು.

ಐದು ಮಹಾನಗರ ಪಾಲಿಕೆಗಳ ಚುನಾವಣೆ ಪೂರ್ವ ತಯಾರಿ, ಮುಂದಿನ ಕಾರ್ಯತಂತ್ರವನ್ನು ಸಮನ್ವಯ ಸಮಿತಿ ರೂಪಿಸಲಿದೆ. ಬೆಂಗಳೂರು ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಕೂಡ ಹೋರಾಟ ನಡೆಯಲಿದೆ ಎಂದರು

ಬೆಂಗಳೂರಿನ ದುರವಸ್ಥೆ, ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗದಷ್ಟು ಹೀನಾಯ ಸ್ಥಿತಿಯಿದೆ. ಇದನ್ನು ತೋರಿಸಿದ ಐಟಿ-ಬಿಟಿ ಉದ್ಯಮಿಗಳಿಗೆ ಬೆದರಿಕೆ ಹಾಕುವಷ್ಟು ದುರಹಂಕಾರವನ್ನು ರಾಜ್ಯ ಸರ್ಕಾರ ರೂಢಿಸಿಕೊಂಡಿದೆ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಲ್ಯಗಳು, ಜನರ ಕಷ್ಟ-ಕಾರ್ಪಣ್ಯ ನಿರ್ಲಕ್ಷ್ಯ, ಹುಸಿ ಆಶ್ವಾಸನೆ, ಕಮಿಷನ್ ಹಾವಳಿ, ಧ್ವನಿ ಎತ್ತಿದವರ ವಿರುದ್ಧವೇ ದಾವೆ ದಾಖಲು ಮುಂತಾದ ವಿಷಯ ಚರ್ಚೆಯಾಗಿದ್ದು, ರಾಜ್ಯಮಟ್ಟದ ಸಮನ್ವಯ ಸಮಿತಿ ಈ ವಿಚಾರಗಳನ್ನು ಕೈಗೆತ್ತಿಕೊಂಡು ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸಲಿದೆ ಎಂದು ಬಿ.ವೈ.ವಿಜಯೇಂದ್ರ ವಿವರಿಸಿದರು.

ಸರ್ಕಾರಕ್ಕೆ ಸವಾಲು

ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ, ದೂರು ನೀಡುವುದೇ ಸಿಎಂ ಸಿದ್ದರಾಮಯ್ಯ ಮತ್ತವರ ಸಂಪುಟ ಸಹೋದ್ಯೋಗಿಗಳ ಕೆಲಸವಾಗಿ ಬಿಟ್ಟಿದೆ ಎಂದು ಕಿಡಿಕಾರಿದರು.

ಹುಳುಕು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ದೂರುತ್ತಿದೆ. ಎರಡೂವರೆಗೆ ವರ್ಷಗಳ ಅಧಿಕಾರಾವಧಿಯಲ್ಲಿ ಒಂದಾದರೂ ಹೊಸ ದೊಡ್ಡ ಯೋಜನೆ ಜಾರಿಗೆ ತಂದಿದ್ದನ್ನು ತೋರಿಸಲಿ ಎಂದು ಸವಾಲೆಸೆದರು.

ಸಚಿವ ಪ್ರಿಯಾಂಕ್ ಖರ್ಗೆಗೆ ಯಾಕೆ ಈ ರೀತಿ ದುರ್ಬುದ್ಧಿ ಬಂತೆಂದು ಗೊತ್ತಿಲ್ಲ. ಆರ್‌ಎಸ್‌ಎಸ್ ಬಗ್ಗೆ ಅನಗತ್ಯ ಟೀಕೆ ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಅಥವಾ ಸಿಎಂ ಕುರ್ಚಿಗೆ ಟವೆಲ್ ಹಾಕುವ ತಂತ್ರವೋ ತಿಳಿಯದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಆರೆಸ್ಸೆಸ್ ಟೀಕೆಯ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಒಂಟಿಯಾಗಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.