ಬೆಂಗಳೂರು:
ಕಳೆದ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿತ್ತು. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮದೇ ಆದ ಕೊಡುಗೆ ನೀಡಲು ಸಂಕಲ್ಪ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಲೋಕಸಭಾ ಸಮರವು ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ ಎಂದರು.
ಜನರಿಗೆ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಲಹದಲ್ಲಿ ತೊಡಗಿದೆ. ಇವರ ಕಚ್ಚಾಟದಿಂದ ಅಧಿಕಾರ ಕುಸಿದು ಬಿದ್ದಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ದುರ್ಮಾರ್ಗದಲ್ಲಿ ಮತ ಗಳಿಸುವ ಕುತಂತ್ರ ನಡೆಸಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಬೇಕು. ಜನರಿಗೆ ವಾಸ್ತವ ಮನವರಿಕೆ ಮಾಡಿಕೊಡುವ ಸವಾಲು ನಮ್ಮ ಮುಂದಿದ್ದು, ಒಗ್ಗಟ್ಟಿನಿಂದ ಎದುರಿಸಬೇಕು ಎಂದರು.
ಜನರು ಈ ಸರಕಾರದ ಬಗ್ಗೆ ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ. ಈ ಸರಕಾರಕ್ಕೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ. ಹೆಣ್ಣುಮಕ್ಕಳ ಮಾನ ರಕ್ಷಿಸಲು ಸಾಧ್ಯವಾಗಿಲ್ಲ. ಅರಾಜಕತೆ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದೆಲ್ಲವನ್ನು ನೋಡುತ್ತ ಸುಮ್ಮನಿರಲು ಅಸಾಧ್ಯ ಎಂದರು.
ನಾವೆಲ್ಲರೂ ಜನರ ಪರವಾಗಿ, ರಾಜ್ಯದ ಪರವಾಗಿ ನಿಂತು ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಮತ್ತೆ ಬಿಜೆಪಿಗೆ ಜಗದೀಶ ಶೆಟ್ಟರ್ ಸೇರಿದ್ದು, ನಮಗೊಂದು ದೊಡ್ಡ ಶಕ್ತಿಯನ್ನು ಕೊಟ್ಟಿದೆ. ಅವರಿಗೆ ವಿಶೇಷ ಸ್ವಾಗತ ಎಂದರು. ನೂತನ ರಾಜ್ಯ, ಜಿಲ್ಲಾ ಪದಾಧಿಕಾರಿಗಳನ್ನು ಯಡಿಯೂರಪ್ಪ ಅವರು ಅಭಿನಂದಿಸಿದರು.