ನ್ಯೂಸ್

ವಕ್ಫ್ ಬಾಧಿತರ ಸಮಾವೇಶಕ್ಕೆ ಬಿಜೆಪಿ ಭಿನ್ನರ ತಂಡ ಚಿಂತನೆ | Team shortly met JPC chairperson Pal

ಬೆಂಗಳೂರು: ವಕ್ಫ್ ಕಾಯ್ದೆಗೆ ತಿದ್ದುಪಡಿ ಮಸೂದೆ ಪರಿಶೀಲನೆಗೆ ನೇಮಿಸಲಾದ ಜಗದಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿಗೆ ಬಿಜೆಪಿ ಭಿನ್ನರ ತಂಡ ಮತ್ತೊಮ್ಮೆ ಭೇಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬೆಂಗಳೂರಿನ ಸದಾಶಿವನಗರದಲ್ಲಿನ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಅತೃಪ್ತರ ಗುಂಪಿನ ನಾಯಕರು ಗುರುವಾರ ಸಭೆ ಸೇರಿದ್ದರು. ವಕ್ಫ್ ಜಾಗೃತಿ ಅಭಿಯಾನದ ಎರಡನೇ ಹಂತದ ಜಿಲ್ಲಾವಾರು ಪ್ರವಾಸದ ಬಗ್ಗೆ ಮಾತುಕತೆ ನಡೆಸಿದರು.

ಈ ನಡುವೆ ಜೆಪಿಸಿ ಅಧ್ಯಕ್ಷ ಪಾಲ್ ನೀಡಿದ ಸೂಚನೆಯಂತೆ ದೆಹಲಿಗೆ ನಿಯೋಗ ತೆರಳಿ, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ತೀರ್ಮಾನಿಸಿದೆ. ಈಗಾಗಲೇ ಜೆಪಿಸಿಯು ಇದೇ ವಿಚಾರವಾಗಿ ರಾಜ್ಯದ ಅಧಿಕಾರಿಗಳನ್ನು ಕರೆಯಿಸಿಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಭಿನ್ನಮತೀಯರಲ್ಲ, ಪ್ರತ್ಯೇಕ ಸಭೆಯಲ್ಲ

ಸಭೆಯ ನಂತರ ಸುದ್ದಿಗಾರರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿ, ಬಿಜೆಪಿಯ ಭಿನ್ನಮತೀಯರು ಅಲ್ಲ, ಪ್ರತ್ಯೇಕ ಸಭೆಯೂ ಇದಲ್ಲ. ನಮ್ಮಮಟ್ಟದಲ್ಲಿ ಜನಪರವಾಗಿ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಹೆಚ್ಚುವರಿ ಮಾಹಿತಿಯೊಂದಿಗೆ ಇಷ್ಟರಲ್ಲೇ ಪಾಲ್ ಅವರನ್ನು ಭೇಟಿಯಾಗಲಿದ್ದೇವೆ. ವಕ್ಫ್ ಬಾಧಿತರ ಸಮಾವೇಶ ಆಯೋಜಿಸಲು ಚರ್ಚಿಸಿದ್ದೇವೆ. ಜನವರಿಯಲ್ಲಿ ಕೆಲವು ಜಿಲ್ಲೆಗಳ ಪ್ರವಾಸ ಕೈಗೊಳ್ಳುವ ಉದ್ದೇಶವಿದ್ದು, ದಿನಾಂಕ ಮತ್ತ ಪ್ರವಾಸದ ವಿವರ ಅಂತಿಮವಾಗಿಲ್ಲ ಎಂದರು.

ವಕ್ಫ್ ಸಮಸ್ಯೆ ಬಗ್ಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ತೃಪ್ತಿ ತಂದಿಲ್ಲ. ಈ ವಿಚಾರ ಮುಂದಿಟ್ಟುಕೊಂಡು ಸದನದಲ್ಲಿ ನಡೆದ ಹೋರಾಟದ ಬಗ್ಗೆ ಏನನ್ನೂ ಹೇಳುವುದಿಲ್ಲ. ಮಾಜಿ ಶಾಸಕರು ಏನೇ ಹೇಳಲಿ, ಜನಪರ ಹೋರಾಟ ಮುಂದುವರಿಸುತ್ತೇವೆ ಎಂದು ಅರವಿಂದ ಲಿಂಬಾವಳಿ ಪುನರುಚ್ಚರಿಸಿದರು.

ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದ ಪ್ರತಾಪಸಿಂಹ ಇನ್ನಿತರರು ಇದ್ದರು ಎಂದು ಮೂಲಗಳು ತಿಳಿಸಿವೆ.