ನ್ಯೂಸ್

ಕಮಲ ಪಕ್ಷದಲ್ಲಿ ಈಗ ಭಿನ್ನರು ಗಪ್‌ಚಿಪ್ ಎಲ್ಲಾ ಹಂತದ ಕಾರ್ಯಕ್ರಮದಲ್ಲಿ ಭಾಗಿ

Bengaluru - Political - Shivananda Tagadur

ಬೆಂಗಳೂರು:

ಪಕ್ಷದ ನಾಯಕರ ಮೇಲೆಯೇ ವಾಗ್ದಾಳಿ ನಡೆಸುತ್ತಿದ್ದ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಕಮಲ ಪಡೆಯಲ್ಲಿ ಭಿನ್ನಸ್ವರ ಕಡಿಮೆಯಾಗಿದೆ.

ಪಕ್ಷದ ನಾಯಕರ ಮೇಲೆ ಟೀಕೆ ಮಾಡುತ್ತಿದ್ದ ಕೆಲ ನಾಯಕರು, ಈಗ ತುಟಿ ಪಿಟಕ್ ಅನ್ನುತ್ತಿಲ್ಲ. ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುತ್ತಿಲ್ಲ. ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡುವುದಕ್ಕೂ ಕಡಿವಾಣ ಬಿದ್ದಿದೆ.

ಬಿಜೆಪಿ ಕಚೇರಿಗೆ ತಪ್ಪದೇ ಬಂದು ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ನಾನಾ ಕಾರಣಕ್ಕಾಗಿ ಮುನಿಸಿಕೊಂಡು ಮನೆ ಸೇರಿದ್ದ ಮುಖಂಡರುಗಳು ಈಗ ಪಕ್ಷದ ಎಲ್ಲಾ ಹಂತಗಳ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸುತ್ತಿರುವುದು ಹೊಸ ಬೆಳವಣಿಗೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಇಂಥದ್ದೆ ಬೆಳವಣಿಗೆ ಆಗುತ್ತಿರುವುದು ವಿಶೇಷ.

ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾದ ಮೇಲೆ ಹಿರಿಯ ಮುಖಂಡರಲ್ಲಿ ಹೆಚ್ಚಿದ್ದ ಅಸಹನೆ, ಸದಾ ಟೀಕೆ ಮೂಲಕ ವ್ಯಕ್ತವಾಗುತಿತ್ತು. ಆ ಕಾರಣಕ್ಕಾಗಿಯೇ ಪಕ್ಷದ ಮುಖಂಡರು ತೀವ್ರ ಮುಜುಗರ ಅನುಭವಿಸಬೇಕಾಗಿ ಬಂದಿದ್ದರಿಂದ ವರಿಷ್ಠರು ಅವರನ್ನು ಪಕ್ಷದಿಂದಲೇ ಹೊರ ಹಾಕುವ ನಿರ್ಣಯ ತೆಗೆದುಕೊಂಡ ಬಳಿಕ ಟೀಕೆ ಟಿಪ್ಪಣಿ ಅಬ್ಬರ ತಗ್ಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ಟೀಕೆ ಮಾಡುವುದನ್ನೆ ಅಭ್ಯಾಸ ಮಾಡಿಕೊಂಡಿದ್ದ ಯತ್ನಾಳ್ ಮೇಲೆ ಕ್ರಮ ಜರುಗಿಸಿದ ಬೆನ್ನಲ್ಲಿಯೇ ಅವರ ನೆರಳಿನಲ್ಲಿದ್ದ ಹಲವು ಮುಖಂಡರು ಮೌನಕ್ಕೆ ಶರಣಾಗಿದ್ದಾರೆ.

ಹೈಕಮಾಂಡ್ ರಾಜ್ಯ ಬಿಜೆಪಿಯ ಎಲ್ಲಾ ಬೆಳವಣಿಗೆ ಕಾಯ್ದು ನೋಡುತ್ತಿದ್ದು, ಯಾವ ಸಂದರ್ಭದಲ್ಲಾದರೂ ಕ್ರಮ ಜರುಗಿಸಬಹುದು ಎನ್ನುವ ಭಯವೂ ನಾಯಕರುಗಳಲ್ಲಿದೆ.