ನ್ಯೂಸ್

ನ್ಯಾಷನಲ್ ಹೆರಾಲ್ಡ್ ಆಸ್ತಿ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ ಮುಂದುವರಿದ ಬಿಜೆಪಿ ವಾಗ್ದಾಳಿ

ಒಂದು ಪೈಸೆ ಹೂಡದೆ -ರೂ. 2,000 ಕೋಟಿ ಆಸ್ತಿ ಮೇಲೆ ಕಣ್ಣು

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ಹಾಗೂ ಕಾಲ ಮಿತಿಯೊಳಗೆ ಕೇಸ್​ಗಳ ಇತ್ಯರ್ಥಕ್ಕೆ ಮನವಿ ಮಾಡುವ ಧೈರ್ಯವಿದೆಯೇ ಎಂದು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಶುಕ್ರವಾರ ಸವಾಲೆಸೆದಿದೆ. ಪ್ರಕರಣದಲ್ಲಿ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಕ್ರಮ ಕೈಗೊಂಡಿರುವುದಕ್ಕೆ ರಾಜಕೀಯವೇ ಕಾರಣವೆಂಬ ಕಾಂಗ್ರೆಸ್ ಆರೋಪಕ್ಕೆ ಆಳುವ ಪಕ್ಷ ಎದಿರೇಟು ನೀಡಿದೆ. ಗಾಂಧಿಗಳ ವಿರುದ್ಧದ ಇ.ಡಿ. ಚಾರ್ಜ್​ಶೀಟ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ಬಿಜೆಪಿ, ಕೆಲವೇ ಜನರು ಓದುವ ನ್ಯಾಷನಲ್ ಹೆರಾಲ್ಡ್ ವಾರ ಪತ್ರಿಕೆಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಜಾಹೀರಾತು ರೂಪದಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದರು ಎಂದು ಆರೋಪಿಸಿದೆ.

ಕಾಂಗ್ರೆಸ್ ಎಟಿಎಂ: ಪತ್ರಿಕೆಯನ್ನು ಕಾಂಗ್ರೆಸ್ ಪಕ್ಷ ತನ್ನ ಎಟಿಎಂನಂತೆ ಬಳಸಿದೆ ಎಂದು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದರು. ತಮ್ಮ ಜೇಬಿನಿಂದ ಒಂದು ಪೈಸೆಯನ್ನೂ ಖರ್ಚು ಮಾಡದೆ ನ್ಯಾಷನಲ್ ಹೆರಾಲ್ಡ್​ನ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪಡೆಯಲು ಗಾಂಧಿದ್ವಯರು ಬಯಸಿದ್ದರು ಎಂದು ಠಾಕೂರ್ ಹೇಳಿದರು. ಉಭಯ ಕಾಂಗ್ರೆಸ್ ನೇತಾರರು ಯಂಗ್ ಇಂಡಿಯನ್ ಕಂಪನಿಯಲ್ಲಿ ಶೇಕಡ 76 ಷೇರು ಹೊಂದಿದ್ದಾರೆ. ಈ ಕಂಪನಿಗೆ ಕಾಂಗ್ರೆಸ್ ಪಕ್ಷ 50 ಲಕ್ಷ ರೂಪಾಯಿ ಸಾಲ ನೀಡಿದೆ ಎಂದು ಠಾಕೂರ್ ವಿವರಿಸಿದರು.

ವಾದ್ರಾ ವಿರುದ್ಧ ಇ.ಡಿ. ಬಿಗಿ ಕುಣಿಕೆ

ನವದೆಹಲಿ: ಗುರುಗ್ರಾಮ ಭೂ ಹಗರಣ ಸಹಿತ ಹಣಕಾಸು ದುರ್ಬಳಕೆಯ ಕನಿಷ್ಠ ಮೂರು ಪ್ರಕರಣಗಳಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಶೀಘ್ರವೇ ಆರೋಪಪಟ್ಟಿಗಳನ್ನು (ಪ್ರಾಸಿಕ್ಯೂಷನ್ ದೂರು) ಸಲ್ಲಿಸುವ ಸಂಭವವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗುರುಗ್ರಾಮ ಪ್ರಕರಣದಲ್ಲಿ ಸತತ ಮೂರನೇ ದಿನವಾದ ಗುರುವಾರವೂ ವಾದ್ರಾರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿತ್ತು. ಪ್ರಾಸಿಕ್ಯೂಷನ್ ದೂರುಗಳ ಸಲ್ಲಿಕೆಯಿಂದಾಗಿ ಮೂರೂ ಪ್ರಕರಣಗಳಲ್ಲಿ ಏಕಕಾಲಕ್ಕೆ ಆರೋಪಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ತಲೆ ಮರೆಸಿಕೊಂಡಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಜತೆಗಿನ ಸಂಪರ್ಕ ಹಾಗೂ ಬಿಕಾನೇರ್ ಭೂ ವ್ಯವಹಾರ ವಾದ್ರಾ ವಿರುದ್ಧದ ಇನ್ನೆರಡು ಕೇಸ್​ಗಳಾಗಿವೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತನಿಖಾ ಸಂಸ್ಥೆ ಚಾರ್ಜ್​ಶೀಟ್ ಸಲ್ಲಿಸಿದ ಬೆನ್ನಲ್ಲೇ ವಾದ್ರಾರನ್ನು ಇ.ಡಿ. ತೀವ್ರವಾಗಿ ವಿಚಾರಿಸಿದೆ. ಕಾಂಗ್ರೆಸ್ ಈ ಹಿಂದೆ ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯ (ಎಜೆಎಲ್) 5,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಇವರಿಬ್ಬರೂ ಶೇಕಡ 76ರಷ್ಟು ಪಾಲು ಹೊಂದಿರುವ ಯಂಗ್ ಇಂಡಿಯಾ ಮೂಲಕ ಆರ್ಥಿಕ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಉಳಿದ ಶೇಕಡ 24 ಪಾಲು ಕಾಂಗ್ರೆಸ್ ಖಜಾಂಚಿಗಳಾಗಿದ್ದ ದಿವಂಗತರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಹೆಸರಿನಲ್ಲಿವೆ.

ಇ.ಡಿ.ಯಿಂದ ಜಗನ್ ಮೋಹನ್ ರೆಡ್ಡಿ ಆಸ್ತಿ ಜಪ್ತಿ

ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ದಾಲ್ಮಿಯಾ ಸಿಮೆಂಟ್ಸ್ (ಭಾರತ್) ಸಂಸ್ಥೆಯ 800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಗಳನ್ನು ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಸುಮಾರು 14 ವರ್ಷಗಳ ಹಿಂದಿನ ಹಣಕಾಸು ದುರ್ಬಳಕೆ ಪ್ರಕರಣದ ಸಂಬಂಧ ಇ.ಡಿ. ಮಹತ್ವದ ಕ್ರಮ ಕೈಗೊಂಡಿದೆ.

ರೆಡ್ಡಿಯವರ 27.5 ಕೋಟಿ ರೂಪಾಯಿ ಮೌಲ್ಯದ ಷೇರು ಹಾಗೂ ದಾಲ್ಮಿಯಾದ 377 ಕೋಟಿ ರೂ. ಮೌಲ್ಯದ ಜಮೀನನ್ನು ಇ.ಡಿ. ಜಪ್ತಿ ಮಾಡಿದೆ. ಆದರೆ, ಇ.ಡಿ. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಮೌಲ್ಯ 793.3 ಕೋಟಿ ರೂಪಾಯಿಯೆಂದು ಷೇರು ವಿನಿಮಯ ಮಾರುಕಟ್ಟೆಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ದಾಲ್ಮಿಯಾ ಸಿಮೆಂಟ್ಸ್ ಹೇಳಿದೆ. ರೆಡ್ಡಿ ಸಿಎಂ ಆಗುವುದಕ್ಕೂ ಮೊದಲು ವಾಣಿಜ್ಯ ವ್ಯವಹಾರದ ಆರಂಭಿಕ ವರ್ಷ ಗಳಲ್ಲಿ ಹೂಡಿಕೆ ಸಂಬಂಧ ಅಕ್ರಮ ಎಸಗಿದ್ದರು ಎನ್ನಲಾದ ಪ್ರಕರಣ ಇದಾಗಿದ್ದು 2011ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಸ್ ದಾಖಲಿಸಿತ್ತು.